ಬಂಟ್ವಾಳ: ತಾಲೂಕಿನ ಮೆಲ್ಕಾರ್ ಎಂಬಲ್ಲಿ ಎರಡು ತಂಡಗಳ ನಡುವಿನ ಘರ್ಷಣೆ ಬಳಿಕ ಚೂರಿ ಇರಿತದಿಂದ ಮೂವರು ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ (ಗುರುವಾರ) ನಡೆದಿದೆ. ಮೆಲ್ಕಾರ್ನಲ್ಲಿ ಎರಡು ತಂಡಗಳ ನಡುವೆ ಕೆಲ ದಿನಗಳ ಹಿಂದೆ ನಡೆದ ಜಗಳ ಚೂರಿ ಇರಿತದ ಹಂತದವರೆಗೆ ಹೋಗಿದೆ. ಗುರುವಾರ ರಾತ್ರಿ 9ಗಂಟೆಗೆ ನಡೆದ ಘಟನೆಯಲ್ಲಿ ತಂಡಗಳ ನಡುವೆ ವೈಯಕ್ತಿಕ ಕಲಹದ ಮುಂದುವರಿದ ಭಾಗವಾಗಿ ಮೂವರ ಮೇಲೆ ಮತ್ತೊಂದು ತಂಡದ ಸದಸ್ಯರು ಇರಿದಿದ್ದಾಗಿ ಹೇಳಲಾಗಿದೆ. ಘಟನೆಯಲ್ಲಿ ಗಾಯಗೊಂಡ ಮೂವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೋಳಂಗಡಿ ನಿವಾಸಿಗಳಾದ ದೇವದಾಸ್, ಸಂದೀಪ್, ಶಂಕರ್ ಚೂರಿ ಇರಿತಕ್ಕೊಳಗಾದವರು. ಬೋಳಂಗಡಿ ನಿವಾಸಿ ಶೋಧನ್, ಕಲ್ಲಡ್ಕ ನಿವಾಸಿ ಯತೀಶ್, ಮೆಲ್ಕಾರ್ ನಿವಾಸಿಗಳಾದ ಚೇತನ್, ಪ್ರಸನ್ನ, ಪ್ರದೀಪ್ ಮತ್ತು ಪ್ರಕಾಶ್ ಅವರ ತಂಡ ಸೇರಿಕೊಂಡು ಹಲ್ಲೆ ಮಾಡಿದ್ದಲ್ಲದೇ ಚೂರಿಯಿಂದ ಇರಿದಿದ್ದಾರೆ ಎಂದು ಅವರು ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಗೆ ಕಾರಣವೇನು?:ಬುಧವಾರ ರಾತ್ರಿ ಪಾಣೆಮಂಗಳೂರು ಶಾರದೋತ್ಸವ ಮೆರವಣಿಗೆ ವೇಳೆ ಎರಡು ತಂಡಗಳ ನಡುವೆ ನಡೆದ ಗಲಾಟೆ ಭಾಗವಾಗಿ ಗುರುವಾರ ರಾತ್ರಿ ಚೂರಿ ಇರಿತದವರೆಗೆ ಮುಂದುವರಿದಿದೆ. ಕೆಲವರ್ಷಗಳ ಹಿಂದೆ ಜೊತೆಯಾಗಿ ಹುಲಿ ವೇಷ ಹಾಕಿ ಶಾರದ ವಿಸರ್ಜನೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಿದ್ದ ಯುವಕರ ತಂಡ ಯಾವುದೋ ವಿಚಾರಕ್ಕೆ ಇಬ್ಬಾಗವಾಗಿದೆ.