ಬೆಳ್ತಂಗಡಿ (ದ.ಕ): ಕಾಂಗ್ರೆಸಿಗರಿಗೆ ಗಾಂಧಿ ಬೇಕೇ ಹೊರತು ಅವರ ಆದರ್ಶವಲ್ಲ. ಸ್ವಚ್ಛ ಭಾರತ್, ಗ್ರಾಮ ನೈರ್ಮಲ್ಯ ಮೂಲಕ ಅವರ ಆದರ್ಶವನ್ನು ಬಿಜೆಪಿ ಪಾಲಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯೆ ಡಾ.ತೇಜಸ್ವಿನಿ ರಮೇಶ್ ಹೇಳಿದ್ದಾರೆ.
ಬೆಳ್ತಂಗಡಿಯ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 71ನೇ ಹುಟ್ಟುಹಬ್ಬದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ಸೇವಾ ಮತ್ತು ಸಮರ್ಪಣಾ ಅಭಿಯಾನ ವಿಚಾರ ಸಂಕೀರ್ಣದಲ್ಲಿ ಭಾಗಿಯಾಗಿ ಮಾತನಾಡಿದರು.
ಮೋದಿಯವರ ಆಡಳಿತದಲ್ಲಿ ದೇಶದ ರಕ್ಷಣೆಯ ಜತೆಗೆ ದೇಶದ ಹಿತದೃಷ್ಟಿಯಿಂದ ಅಭಿವೃದ್ಧಿ ಕೆಲಸಗಳಾಗಿದೆ. ನಾವು ಪ್ರತಿಯೊಬ್ಬರು ಮೋದಿಯವರ ಹಾಗೆ ಕೆಲಸ ಮಾಡಿರುವ ಪರಿಣಾಮ ಈಗ ನಾವು ಅಧಿಕಾರದಲ್ಲಿದ್ದೇವೆ. ಅಧಿಕಾರಕ್ಕೆ ಬಂದ ಮೇಲೆ ಜಲ ಮಾರ್ಗ, ವಾಯು ಮಾರ್ಗ, ಭೂಮಾರ್ಗ ಸುರಕ್ಷಿತ ಮಾಡಿದ್ದೇವೆ. ಜತೆಗೆ ಅಕ್ರಮ ಶಸ್ತ್ರಾಸ್ತ್ರ, ಭಯೋತ್ಪಾದಕ ತರಬೇತಿಯನ್ನು ನಿಲ್ಲಿಸಲಾಗಿದೆ ಎಂದರು.