ಸುಬ್ರಹ್ಮಣ್ಯ(ದಕ್ಷಿಣಕನ್ನಡ):ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೆಲಸದಿಂದ ತೆಗೆದು ಹಾಕಿದ ಮಲೇಕುಡಿಯ ವಂಶಸ್ಥರನ್ನು ಎನ್ಎಂಆರ್ ನೆಲೆಯಲ್ಲಿ ಮರು ನೇಮಕ ಮಾಡಲಾಗುವುದು. ದೇವಳದ ಕಟ್ಟಡಗಳಿಗೆ ಮೂರು ವರ್ಷಕೊಮ್ಮೆ ಸುಣ್ಣ, ಬಣ್ಣ ಬಳಿಯಲಾಗುವುದು. ದೇವಸ್ಥಾನಕ್ಕೆ ಆದಾಯ ಬರುವ ಸಲುವಾಗಿ ಪಿಪಿಪಿ ಮಾಡೆಲ್ ಅಡಿಯಲ್ಲಿ ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ. ಕಲುಷಿತ ನೀರು ನದಿಗೆ ಸೇರದಂತೆ ವ್ಯವಸ್ಥೆ ಮಾಡಲಾಗುವುದು. ಸುಸಜ್ಜಿತ ಪಾರ್ಕಿಂಗ್, ಗೋಶಾಲೆ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗುವುದೆಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹೇಳಿದರು.
ದೇವಸ್ಥಾನದಲ್ಲಿ ಜಿಲ್ಲಾಡಳಿತದ ವತಿಯಿಂದ ನಿರ್ಮಾಣವಾಗಲಿರುವ ವಿಶಾಲವಾದ ಗೋಶಾಲೆ ನಿರ್ಮಾಣದ ಬಗ್ಗೆ ಯೋಜನೆ ರೂಪಿಸಲಾಗಿದೆ. ಅರಣ್ಯ ಇಲಾಖೆಯ ಸಹಯೋಗದಲ್ಲಿ ಜಾಗಗಳ ಸ್ಥಳ ತನಿಖೆ ಮಾಡಲಾಗಿದೆ. ದೇವಳಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಅತೀ ಶೀಘ್ರವಾಗಿ ವಿಲೇವಾರಿ ಮಾಡಲು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಆಶ್ಲೇಷ ಬಲಿ ಸೇರಿದಂತೆ ಇತರೆ ಸೇವೆಗಳ ನಿರ್ವಹಣೆ ಬಗ್ಗೆ, ಭಕ್ತರಿಗೆ ಪೂರಕ ವ್ಯವಸ್ಥೆ ಸೇರಿ ಹಲವು ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.