ಮಂಗಳೂರು:ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ರಾತ್ರಿ 12.30 ವರೆಗೆ ಮಾತ್ರ ಪಬ್, ರೆಸ್ಟೋರೆಂಟ್, ಬಾರ್ಗಳಿಗೆ ಅನುಮತಿ ನೀಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಹೇಳಿದರು.
ಮಂಗಳೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಹೊರಡಿಸಿದ ಮಾರ್ಗಸೂಚಿಯಂತೆ ಪಬ್, ರೆಸ್ಟೋರೆಂಟ್, ಬಾರ್ ಮಾಲೀಕರು ಪಾಲಿಸಬೇಕು. ಅಬಕಾರಿ ಇಲಾಖೆ ಮದ್ಯ ಸರಬರಾಜು ಸಂಬಂಧಿಸಿದಂತೆ ನೀಡಿರುವ ಅನುಮತಿಯಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ ಎಂದರು.
ಇನ್ನು, 10 ಗಂಟೆಯ ಬಳಿಕ ಸೌಂಡ್ಸ್ ಬಳಕೆಗೆ ಅವಕಾಶ ಇಲ್ಲ. ಸುಪ್ರೀಂ ಕೋರ್ಟ್ ನಿಯಮದಂತೆ ರಾತ್ರಿ 10 ಗಂಟೆಯ ಬಳಿಕ ಧ್ವನಿವರ್ಧಕವನ್ನು ಬಳಸುವಂತಿಲ್ಲ ಎಂದರು. ಇನ್ನೂ ನಗರ ವ್ಯಾಪ್ತಿಯಲ್ಲಿ 32 ಕಡೆ ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದೆ. ಹೊಸ ವರ್ಷದ ಸಂಭ್ರಮದಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸುವುದು ಮತ್ತು ಅತಿ ವೇಗವಾಗಿ ವಾಹನ ಚಲಾಯಿಸುವುದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮೀಷನರ್ ಸೂಚಿಸಿದರು.
ಪೊಲೀಸ್ ಅಧಿಕಾರಿಗಳ ಸಭೆ:ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಂಗಳೂರು ನಗರದ ಪೊಲೀಸ್ ಅಧಿಕಾರಿಗಳ ಸಭೆಯನ್ನು ಪೊಲೀಸ್ ಕಮೀಷನರ್ ಶಶಿಕುಮಾರ್ ನಡೆಸಿದರು. ಹೊಸ ವರ್ಷಾಚರಣೆಯ ಮಾರ್ಗಸೂಚಿ ಪಾಲನೆಯಾಗುವಂತೆ ಕ್ರಮ ವಹಿಸಲು ಸೂಚಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸಭೆಯಲ್ಲಿ ಸೂಚಿಸಲಾಗಿದೆ.
ಬಜರಂಗದಳ ಎಚ್ಚರಿಕೆ:ಇನ್ನು, ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಅನ್ಯಮತೀಯ ಯುವಕರಿಗೆ ಪ್ರವೇಶ ನೀಡದಂತೆ ಬಜರಂಗದಳ ಈಗಾಗಲೇ ಎಚ್ಚರಿಕೆ ನೀಡಿದೆ. ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಬಿಂಬಿಸುವ ಪಾರ್ಟಿಗಳ ವಿರುದ್ಧ ಬಜರಂಗದಳ ಆಕ್ರೋಶ ವ್ಯಕ್ತಪಡಿಸಿದ್ದು, ಈಗಾಗಲೇ ಪಾರ್ಟಿಗಳನ್ನು ರಾತ್ರಿ 11ರೊಳಗೆ ಮುಗಿಸುವಂತೆ ಬಜರಂಗದಳ ಪೊಲೀಸ್ ಕಮಿಷನರ್ ಅವರಿಗೆ ಮನವಿ ಮಾಡಿದೆ. ಇಲ್ಲದಿದ್ದಲ್ಲಿ ಬಜರಂಗದಳದ ಕಾರ್ಯಕರ್ತರೇ ಪಾರ್ಟಿಗಳನ್ನು ಬಂದ್ ಮಾಡಿಸುತ್ತದೆ ಎಂದು ಬಜರಂಗದಳ ಎಚ್ಚರಿಕೆ ನೀಡಿದೆ.
ಪಾರ್ಟಿ ನೆಪದಲ್ಲಿ ಹೋಟೆಲ್, ಪಬ್ ಗಳಲ್ಲಿ ಲವ್ ಜಿಹಾದ್, ಡ್ರಗ್ಸ್ ಜಿಹಾದ್ ನಡೆಯುತ್ತಿದೆ. ಈ ಮೂಲಕ ದುಶ್ಚಟಗಳಿಗೆ ಪ್ರೇರಣೆ ನೀಡಲಾಗುತ್ತಿದೆ. ಬೇರೆ ಧರ್ಮವನ್ನು ಪಾಲಿಸುವ ಅನ್ಯಕೋಮಿನ ಯುವಕರು ಅವರ ಜಮಾಅತ್ ಅನ್ನು ಮಾತ್ರ ಒಪ್ಪುತ್ತಾರೆ. ಅವರ ಧರ್ಮದ ಪ್ರಕಾರ ಅವರಿಗೆ ಪಾರ್ಟಿಗಳು, ಸಂಗೀತ ನಿಷಿದ್ಧವಾಗಿದೆ. ಆದರೆ ಮಂಗಳೂರಿನ ಎಲ್ಲಾ ಪಬ್ ಗಳಲ್ಲಿ ಆ ಧರ್ಮದ ಯುವಕರೇ ಹೆಚ್ಚಾಗಿ ಕಾಣಸಿಗುತ್ತಾರೆ. ಆದ್ದರಿಂದ ಎಲ್ಲಾ ಪಬ್, ಹೋಟೆಲ್ ಮಾಲೀಕರು ಯಾವುದೇ ಹೊಸ ವರ್ಷಾಚರಣೆಯ ಪಾರ್ಟಿಗಳಿಗೆ ಆ ಯುವಕರಿಗೆ ಪ್ರವೇಶ ನೀಡದಂತೆ ಬಜರಂಗಳ ಮುಖಂಡರು ಆಗ್ರಹಿಸಿದ್ದರು.
ಇದನ್ನೂ ಓದಿ:ಹೊಸ ವರ್ಷಾಚರಣೆಗೆ ಸಿದ್ಧತೆ: ಹೋಟೆಲ್, ಪಬ್, ಬಾರ್ & ರೆಸ್ಟೋರೆಂಟ್ ಟೆರೇಸ್ಗಳಿಗೆ ನೋ ಎಂಟ್ರಿ