ಮಂಗಳೂರು: ನಗರದ ಮುಕ್ಕ ಎಂಬಲ್ಲಿ ಹುಚ್ಚು ನಾಯಿಗಳ ಕಾಟ ಹೆಚ್ಚಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಮುಕ್ಕ, ಮಲ್ಲಮಾರ್, ದೊಂಬೇಲ್, ದೊಂಬೇಲ್ ಬೀಚ್, ಶರತ್ ಬಾರ್ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಚ್ಚುನಾಯಿಗಳು ಹೆಚ್ಚಾಗಿವೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಕೆಲದಿನಗಳ ಹಿಂದೆ ಮಲ್ಲಮಾರ್ ನಿವಾಸಿಯೊಬ್ಬರ ಮನೆಯೊಳಗೆ ನುಗ್ಗಿದ ನಾಯಿಗಳು ಮನೆ ಮಾಲಿಕ ಸಂತೋಷ್ ಹಾಗೂ ಅವರ ಮಗಳಿಗೆ ಕಚ್ಚಿ ಗಾಯಗೊಳಿಸಿದ್ದವು. ಪರಿಣಾಮ, ಸಂತೋಷ್ ಅವರ ಮಗಳ ಕೈ ನರವೇ ತುಂಡಾಗಿತ್ತು. ಕಾಲಿಗೂ ತೀವ್ರ ಸ್ವರೂಪದ ಗಾಯಗಳಾಗಿತ್ತು. ಸದ್ಯ ವೆನ್ಲಾಕ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ತಿಳಿದು ಬಂದಿದೆ.