ಮಂಗಳೂರು :ನಾಡಿನೆಲ್ಲೆಡೆ ಇಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಕೃಷ್ಣನೂರು ಉಡುಪಿ ಸೇರಿದಂತೆ ಕರಾವಳಿಯಲ್ಲಿ ಸಂಭ್ರಮ ಮನೆಮಾಡಿದೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಮುಂಜಾನೆಯಿಂದಲೇ ಭಕ್ತರು ದೇವರ ದರ್ಶನ ಪಡೆಯಲು ಆಗಮಿಸುತ್ತಿದ್ದು, ಸರತಿ ಸಾಲಿನಲ್ಲಿ ನಿಂತು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಹೌದು, ಉಡುಪಿ ಜಿಲ್ಲೆಯ ಶ್ರೀ ಕೃಷ್ಣ ದೇವಾಲಯದ ರಥಬೀದಿಯಲ್ಲಿ ಹಬ್ಬದ ಸಡಗರ ಮೇಲೈಸಿದೆ. ದೇವರ ದರ್ಶನ ಮಾಡಿ ಪುನೀತರಾಗುತ್ತಿರುವ ಭಕ್ತರು, ಇಂದು ಉಪವಾಸದಿಂದ ಇರುತ್ತಾರೆ. ರಾತ್ರಿ 12 ಗಂಟೆ ಸುಮಾರಿಗೆ ಅರ್ಘ್ಯ ಪ್ರದಾನ ನಡೆಯಲಿದ್ದು, ಆ ಬಳಿಕ ಫಲಾಹಾರ ಸೇವನೆ ಮಾಡುತ್ತಾರೆ.
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಾಳೆ ವಿಟ್ಲಪಿಂಡಿ ನಡೆಯುತ್ತದೆ. ಇದೊಂದು ಜಾತ್ರೆಯ ವಾತಾವರಣ ಸೃಷ್ಟಿಸುವ ಉತ್ಸವ. ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಮೃಣ್ಮಯ ಮೂರ್ತಿಯನ್ನು ಪೂಜಿಸಲಾಗುತ್ತಿದ್ದು, ಈ ಮೂರ್ತಿಯನ್ನು ರಥದಲ್ಲಿರಿಸಿ ಬೀದಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ನಾಳೆ ಮಧ್ಯಾಹ್ನ ನಡೆಯುವ ಈ ಮೆರವಣಿಗೆಯಲ್ಲಿ ವಿವಿಧ ವೇಷಧಾರಿಗಳು, ಹುಲಿ ವೇಷ ನರ್ತನಗಳು ಗಮನಸೆಳೆಯುತ್ತವೆ. ಇದನ್ನು ವೀಕ್ಷಿಸಲೆಂದೆ ಜನಸಾಗರವೇ ರಥಬೀದಿಗೆ ಹರಿದುಬರುತ್ತದೆ. ಈ ಮೆರವಣಿಗೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಅರ್ಪಿಸಿದ ಉಂಡೆ ಚಕ್ಕುಲಿಯನ್ನು ಭಕ್ತರಿಗೆ ಪ್ರಸಾದವಾಗಿ ಹಂಚಲಾಗುತ್ತದೆ.
ಈ ಬಾರಿಯ ಕೃಷ್ಣ ಜನ್ಮಾಷ್ಟಮಿ ವಿಟ್ಲಪಿಂಡಿ ಮಹೋತ್ಸವದಂದು ಶಿರೂರು ಮಠದ ವತಿಯಿಂದ ಸುಮಾರು 4 ಲಕ್ಷ ರೂ. ನೋಟಿನ ಮಾಲೆಗಳನ್ನು ವಿವಿಧ ಕಲಾ ತಂಡಗಳಿಗೆ ನೀಡಿ ಗೌರವಿಸಲಾಗುವುದು ಎಂದು ಶಿರೂರು ಮಠಾಧೀಶ ಶ್ರೀ ವೇದವರ್ಧನತೀರ್ಥರು ತಿಳಿಸಿದ್ದಾರೆ. ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥರು ಈ ಹಿಂದೆ ವಿಜೃಂಭಣೆಯಿಂದ ಕೃಷ್ಣಜನ್ಮಾಷ್ಟಮಿಯನ್ನು ಆಚರಿಸುತ್ತಿದ್ದರು. ಅವರಂತೆಯೇ ಸಂಭ್ರಮ, ಸಡಗರದಿಂದ ಅಷ್ಟಮಿಯನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.