ಮಂಗಳೂರು: ಕೆಫೆ ಕಾಫಿ ಡೇ ಮಾಲಿಕ ಸಿದ್ದಾರ್ಥ್ ಅವರು ಉಳ್ಳಾಲ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಮಾಜಿ ಸಚಿವ ಯು ಟಿ ಖಾದರ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ಉಳ್ಳಾಲ ಸೇತುವೆಗೆ ಫೈಬರ್ ಗ್ಲಾಸ್ ಅಳವಡಿಸುವಂತೆ ಒತ್ತಾಯಿಸಿದ್ದಾರೆ.
ವಿ ಜಿ ಸಿದ್ದಾರ್ಥ್ ಆತ್ಮಹತ್ಯೆ ಹಿನ್ನೆಲೆ.. ಉಳ್ಳಾಲ ಸೇತುವೆಗೆ ಫೈಬರ್ ಗ್ಲಾಸ್ ಅಳವಡಿಸಿ.. - ಮಾಜಿ ಸಚಿವ ಯು ಟಿ ಖಾದರ್
ಕೆಫೆ ಕಾಫಿ ಡೇ ಮಾಲೀಕ ವಿ ಜಿ ಸಿದ್ದಾರ್ಥ ಉಳ್ಳಾಲ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಮೃತ ಪಟ್ಟರುವ ಹಿನ್ನಲೆಯಲ್ಲಿ, ಉಳ್ಳಾಲ ಸೇತುವೆಗೆ ಫೈಬರ್ ಗ್ಲಾಸ್ ಅಳವಡಿಸಿ. ಈ ತರಹದ ಅನಾಹುತಗಳನ್ನು ತಪ್ಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರದ ಮೂಲಕ ಮಾಜಿ ಸಚಿವ ಯು ಟಿ ಖಾದರ್ ಮನವಿ ಮಾಡಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಯು ಟಿ ಖಾದರ್, ಸುಂದರ ತಾಣವಾಗಿರುವ ಉಳ್ಳಾಲ ಸೇತುವೆ ನಮ್ಮ ದುರಾದೃಷ್ಟಕ್ಕೆ ಸುಸೈಡ್ ಪಾಯಿಂಟ್ ಆಗಿದೆ. ಆ ಕಾರಣದಿಂದ ಉಳ್ಳಾಲ ಸೇತುವೆಯಿಂದ ಯಾರೂ ಸಹ ಆತ್ಮಹತ್ಯೆ ಮಾಡಲು ಸಾಧ್ಯವಾಗದಂತೆ ಫೈಬರ್ ಗ್ಲಾಸ್ ಅಳವಡಿಸಿದರೆ ಇಲ್ಲಿ ಆತ್ಮಹತ್ಯೆ ತಡೆಯಲು ಸಾಧ್ಯವಿದೆ ಮತ್ತು ಜನರಿಗೆ ಪ್ರೇಕ್ಷಣೀಯ ಸ್ಥಳವಾಗಲಿದೆ ಎಂದರು. ಈ ನಿಟ್ಟಿನಲ್ಲಿ ಫೈಬರ್ ಗ್ಲಾಸ್ ಹಾಗೂ ಸಿಸಿಟಿವಿ ಅಳವಡಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಅವಸರದಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲ. ದ.ಕ ಜಿಲ್ಲೆಯಲ್ಲಿ ಗಾಂಜಾ, ಮಟ್ಕಾವನ್ನು ಮಟ್ಟ ಹಾಕುತ್ತಿದ್ದ ಸಂದರ್ಭದಲ್ಲಿ ವರ್ಗಾವಣೆ ಮಾಡಿರುವುದರಿಂದ ಕಾರ್ಯಾಚರಣೆಗೆ ತೊಡಕಾಗಿದೆ. ಜಿಲ್ಲೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದನ್ನು ನಿಲ್ಲಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.