ಮಂಗಳೂರು:ಅಡಿಕೆಯ ಆಮದು ಮಾಡುವುದನ್ನು ಸಂಪೂರ್ಣ ಸ್ಥಗಿತಗೊಳಿಸಲು ಕೇಂದ್ರ ಸರಕಾರ ಕಠಿಣ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ನಳಿನ್ ಕುಮಾರ್ ಕಟೀಲು ಸುದ್ಧಿಗೋಷ್ಠಿ ಕೊಡಿಯಾಲ್ ಬೈಲ್ನಲ್ಲಿರುವ ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಹಿಂದೆ ನಿರ್ಮಲಾ ಸೀತಾರಾಮನ್ ಹಾಗೂ ಸುರೇಶ್ ಪ್ರಭು ಅವರು ವಾಣಿಜ್ಯ ಸಚಿವರಾಗಿದ್ದಾಗ ಆಮದು ಆಗುವಂತಹ ಅಡಿಕೆಗಳಿಗೆ ಸುಂಕ ವಿಧಿಸಲಾಗುತ್ತಿತ್ತು. ಆದರೂ ಕಳ್ಳತನದಿಂದ ಬೇರೆ ಬೇರೆ ಭಾಗಗಳಿಂದ ಅಡಿಕೆ ಆಮದಾಗುತ್ತಿತ್ತು. ಈಗ ಮತ್ತೊಮ್ಮೆ ಕ್ಯಾಂಪ್ಕೊ ಅಧ್ಯಕ್ಷರ ನೇತೃತ್ವದಲ್ಲಿ ನಾನು, ಶೋಭಾ ಕರಂದ್ಲಾಜೆ ಹಾಗೂ ಪ್ರತಾಪ್ ಸಿಂಹ ಅವರು ಆಮದಾಗುವ ಅಡಿಕೆಗಳನ್ನು ತಡೆಗಟ್ಟುವ ನೆಲೆಯಲ್ಲಿ ಗೃಹಸಚಿವರ ಗಮನಸೆಳೆದಿದ್ದೇವೆ. ತಕ್ಷಣ ಈ ಬಗ್ಗೆ ಗಮನ ಹರಿಸಿ ಅಡಿಕೆ ಆಮದಿಗೆ ಕಡಿವಾಣ ಹಾಕುವಂತಹ ವ್ಯವಸ್ಥೆ ಮಾಡಲಾಗುವುದು ಎಂದು ಗೃಹಸಚಿವರಿಂದ ಭರವಸೆ ಲಭಿಸಿದೆ ಎಂದು ಹೇಳಿದರು.
ಇನ್ನು ನಮ್ಮ ಜಿಲ್ಲೆಯ ರೈಲ್ವೆ ಸಮಸ್ಯೆಯನ್ನು ಪರಿಹರಿಸಲು ರೈಲ್ವೆ ಸಚಿವರ ಗಮನ ಸೆಳೆಯಲಾಗಿದ್ದು, ನಮ್ಮ ಜಿಲ್ಲೆಯಲ್ಲೂ ರೈಲ್ವೆ ವಲಯ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಪಾಲ್ಘಾಟ್ನಿಂದ ಮೈಸೂರು ಅಥವಾ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಬಗ್ಗೆ ಚಿಂತನೆ ಮಾಡಲಾಗಿದೆ. ಇತ್ತೀಚೆಗೆ ರೈಲ್ವೆ ಸಚಿವರು ಸಭೆ ಕರೆದಿದ್ದು, ಮುಂದಿನ ವಾರ ಬಜೆಟ್ ಅಧಿವೇಶನದ ಬಳಿಕ ಈ ಬಗ್ಗೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ನಳಿನ್ ಕುಮಾರ್ ಹೇಳಿದರು.
ಹೆದ್ದಾರಿ ಯೋಜನೆಗೆ ಗಡ್ಕರಿ ನೇತೃತ್ವದಲ್ಲಿ ಶೀಘ್ರ ಸಭೆ:
ನಮ್ಮ ಜಿಲ್ಲೆಯ ರಸ್ತೆ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರೊಂದಿಗೆ ಮಾತನಾಡಿದ್ದು, ಈಗಾಗಲೇ ಕುಲಶೇಖರ-ಕಾರ್ಕಳ ರಸ್ತೆಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಪ್ರಥಮ ಹಂತದಲ್ಲಿ ಭಾರತ್ ಮಾಲಾ ಬೈಪಾಸ್ ರಸ್ತೆ ಹಾಗೂ ಬಿ.ಸಿ.ರೋಡ್ನಿಂದ ಪುಂಜಾಲಕಟ್ಟೆಯವರೆಗೆ ವಿಸ್ತರಣೆ ಮಾಡಿ ಚಾರ್ಮಾಡಿವರೆಗೆ ಮುಂದಿನ ಹಂತಕ್ಕೆ ಕಾಮಗಾರಿ ಆರಂಭಿಸಲಾಗುವುದು. ಅಲ್ಲದೆ ಬಿ.ಸಿರೋಡ್ನಿಂದ ಅಡ್ಡಹೊಳೆಯವರೆಗೆ ಚತುಷ್ಪಥ ಕಾಂಕ್ರೀಟ್ ಕಾಮಗಾರಿಗೆ ಕಾನೂನು ಸಮಸ್ಯೆ ಪರಿಹಾರ ಮಾಡಿ, ವೇಗ ಕೊಡುವ ಕೆಲಸ ಆಗಿದೆ. ಅದಕ್ಕಾಗಿ ನಿತಿನ್ ಗಡ್ಕರಿಯವರ ನೇತೃತ್ವದಲ್ಲಿ ಮುಂದಿನವಾರ ಎಲ್ಲಾ ಅಧಿಕಾರಿಗಳ ಸಭೆ ಕರೆಯಲಾಗಿದೆ. ಈಗಾಗಲೆ ಬೆಂಗಳೂರಿನಿಂದ ಮೈಸೂರುವರೆಗೆ ಚತುಷ್ಪಥ ರಸ್ತೆಯ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಮೈಸೂರಿನಿಂದ ಮಡಿಕೇರಿ, ಮಡಿಕೇರಿಯಿಂದ ಮಾಣಿವರೆಗೆ ರಸ್ತೆಯನ್ನು ವಿಸ್ತಾರಣೆ ಮಾಡಬೇಕೆಂದು ಗಡ್ಕರಿಯವರಲ್ಲಿ ಕೇಳಿಕೊಳ್ಳಲಾಗಿದೆ. ಪ್ರಥಮ ಹಂತದಲ್ಲೇ ಈ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ನಳಿನ್ ಕುಮಾರ್ ಹೇಳಿದರು.