ಮಂಗಳೂರು: ತನ್ನ ಮತ್ತು ತಂಗಿಯ ಮದುವೆಗೆ ಬೇಕಾಗಿ ದುಡಿದ ದುಡ್ಡು ಸಿಗದೆ, ರಜೆಯು ಸಿಗದೆ ದಿಗಿಲುಗೊಂಡು ಮಾನಸಿಕ ಅಸ್ವಸ್ಥನಾದ ಯುವಕನನ್ನು ಗುಣಪಡಿಸಿ ಮತ್ತೆ ಕುಟುಂಬದ ತೆಕ್ಕೆಗೆ ನೀಡುವಲ್ಲಿ ಮಂಗಳೂರಿನ ವೈಟ್ ಡೌಸ್ ಯಶಸ್ವಿಯಾಗಿದೆ. ಉತ್ತರಪ್ರದೇಶದ ಅಲಹಾಬಾದ್ನ ಮೊಹಮ್ಮದ್ ಆಯುಬ್ ಎಂಬವರ ಪುತ್ರ ಶಿಬು ಯಾನೆ ಮೊಹಮ್ಮದ್ ತೊಯಿಬ್ ಎಂಬ ಯುವಕ ಮಂಗಳೂರಿನ ವೈಟ್ ಡೌಸ್ನಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಗುಣಮುಖನಾಗಿದ್ದಾನೆ.
ಅಲಹಾಬಾದ್ನ ಶಿಬು ಶಿವಕಾಶಿಯಲ್ಲಿ ಕ್ಯಾಲೆಂಡರ್ ತಯಾರಿಸುವ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತನ ಸೋದರಿಗೆ ಮದುವೆ ನಿಶ್ಚಯವಾಗಿತ್ತು. ಆಕೆಯ ಮದುವೆಯ ಬಳಿಕ ಈತನಿಗೂ ಮದುವೆ ಮಾಡಲು ಯುವತಿ ನೋಡಲಾಗಿತ್ತು. ಮದುವೆಯ ತಯಾರಿಯ ಹಿನ್ನೆಲೆಯಲ್ಲಿ ಶಿಬು ತಾನು ಕೆಲಸ ಮಾಡುವ ಸಂಸ್ಥೆಯಲ್ಲಿ ರಜೆ ಮತ್ತು ದುಡಿದ ಹಣ ಕೇಳಿದ್ದ. ಆದರೆ ಸಂಸ್ಥೆ ಎರಡನ್ನೂ ನೀಡಲು ನಿರಾಕರಿಸಿತ್ತು.
ಇದರಿಂದ ದಿಗಿಲುಗೊಂಡ ಈತ ರೈಲ್ವೆ ಸ್ಟೇಷನ್ಗೆ ಹೋಗಿ ರೈಲು ಹತ್ತಿದ್ದಾನೆ. ತೀರಾ ಆತಂಕದಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡು ಅಸ್ವಸ್ಥನಾಗಿದ್ದಾನೆ. ಹೀಗೆ ರೈಲು ಹತ್ತಿ ಬಂದವನು ಮಂಗಳೂರು ತಲುಪಿದ್ದಾನೆ. ಮಂಗಳೂರು ನಗರದಲ್ಲಿ ಸುಮಾರು ನಾಲ್ಕು ದಿನಗಳಿಂದ ಮಾನಸಿಕ ಅಸ್ವಸ್ಥನಾಗಿ ಬೀದಿ ಬೀದಿ ಅಳೆಯುತ್ತಿದ್ದ ಈತನನ್ನು 2019 ಮೇ ತಿಂಗಳಲ್ಲಿ ನಿರ್ಗತಿಕರಿಗೆ ನೆರವಾಗುವ ನಗರದ ವೈಟ್ ಡೌಸ್ ಸಂಸ್ಥೆಯ ಕೊರಿನ್ ರಸ್ಕಿನ್ ಅವರು ಗಮನಿಸಿ ತಮ್ಮ ಸಂಸ್ಥೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಿದ್ದಾರೆ.
ತನ್ನ ಹೆಸರು ಬಿಟ್ಟು ಬೇರೇನೂ ಹೇಳ್ತಿರಲಿಲ್ಲ:ಸುಮಾರು ಮೂರು ವರ್ಷದಿಂದ ಈತ ತನ್ನ ಹೆಸರು ಶಿಬು ಎಂಬುದನ್ನು ಬಿಟ್ಟು ಬೇರೇನೂ ಹೇಳುತ್ತಿರಲಿಲ್ಲ. ಇತ್ತೀಚೆಗೆ ಆತನಿಗೆ ತನ್ನ ನೆನಪಿನ ಶಕ್ತಿ ಮರಳಿ ಬಂದಿದ್ದು, ಅಲಹಬಾದ್ನಲ್ಲಿ ತಾನು ಕಲಿತ ಶಾಲೆಯ ಹೆಸರನ್ನು ಹೇಳಿದ್ದಾನೆ. ಅಸ್ಪಷ್ಟವಾಗಿದ್ದ ಅವನ ಶಾಲೆಯ ಹೆಸರನ್ನು ಹುಡುಕಿ ವೈಟ್ ಡೌಸ್ ಸಂಸ್ಥೆ ಮ್ಯಾನೇಜರ್ ಅವರು ದೂರವಾಣಿ ಮೂಲಕ ಶೋಧ ನಡೆಸಿದರು.
ದೂರವಾಣಿಯಲ್ಲಿ ಅವನು ಹೇಳಿದ ಶಾಲೆ ಗೊತ್ತಾಗದಿದ್ದರೂ ಶಾಲೆಯವರ ಮೂಲಕ ಶಿಬುವಿನ ಗ್ರಾಮದ ಸರಪಂಚರನ್ನು ಸಂಪರ್ಕಿಸಲು ಸಾಧ್ಯವಾಯಿತು. ಆ ಮೂಲಕ ಶಿಬುವಿನ ತಂದೆಯ ಮೊಬೈಲ್ ನಂಬರ್ ಪತ್ತೆಯಾಗಿತ್ತು. ತನ್ನ ಮಗ ಮಂಗಳೂರಿನಲ್ಲಿ ಇರುವ ವಿಚಾರ ತಿಳಿದ ಮೊಹಮ್ಮದ್ ಆಯುಬ್ ಅವರು ಕೂಡಲೇ ಅಲಹಬಾದ್ನಿಂದ ರೈಲು ಹತ್ತಿ ಮಂಗಳೂರಿಗೆ ಬಂದಿದ್ದಾರೆ.