ಕಡಬ: ತಾಲೂಕಿನ ಪೆರಾಬೆ ಗ್ರಾಮದ ಅತ್ರಿಜಾಲು ಕದಿರಡ್ಕ ಪ. ಜಾತಿ ಕಾಲೋನಿ ಮತ್ತು ಅಗತ್ತಾಡಿ ಕಾಲೋನಿ ರಸ್ತೆ ಅಭಿವೃದ್ಧಿಗೆ ಮಂಜೂರಾದ ಅನುದಾನವನ್ನು ಮುಖ್ಯರಸ್ತೆಗೆ ಬಳಸಲು ಹುನ್ನಾರ ನಡೆಸಲಾಗುತ್ತಿದೆ. ಇದು ದಲಿತರಿಗೆ ಮಾಡುವ ಅನ್ಯಾಯ ಎಂದು ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಆರೋಪಿಸಿದರು.
ಅಂಗಾರರಿಗೆ ನಮ್ಮ ಮತಗಳು ಬೇಕು, ದಲಿತರ ಅಭಿವೃದ್ಧಿ ಬೇಡ: ಸೇಸಪ್ಪ ಬೆದ್ರಕಾಡು - kadaba dakshina kannada latest news
ಪೆರಾಬೆ ಕಾಲೋನಿ ರಸ್ತೆಗೆ ಮಂಜೂರಾದ 80 ಲಕ್ಷ ರೂ. ಅನುದಾನವನ್ನು ಸುಳ್ಯ ಶಾಸಕ ಎಸ್. ಅಂಗಾರ ಅವರು ಮುಖ್ಯ ರಸ್ತೆಗೆ ಬಳಸಲು ಷಡ್ಯಂತರ ನಡೆಸುತ್ತಿದ್ದಾರೆ. ಶಾಸಕರಿಗೆ ದಲಿತರ ಮತಗಳು ಬೇಕು, ಆದರೆ ದಲಿತರ ಕಾಲೋನಿಗೆ ಹೋಗುವ ರಸ್ತೆ ಅಭಿವೃದ್ಧಿ ಬೇಡ ಎಂದು ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಆರೋಪಿಸಿದರು.
ಕಡಬದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಸೇಸಪ್ಪ ಬೆದ್ರಕಾಡು, ಪೆರಾಬೆ ಕಾಲೋನಿ ರಸ್ತೆಗೆ ಮಂಜೂರಾದ 80 ಲಕ್ಷ ರೂ. ಅನುದಾನವನ್ನು ಸುಳ್ಯ ಶಾಸಕ ಎಸ್. ಅಂಗಾರ ಅವರು ಮುಖ್ಯ ರಸ್ತೆಗೆ ಬಳಸಲು ಷಡ್ಯಂತರ ನಡೆಸಿದಾಗ ದಲಿತ್ ಸೇವಾ ಸಮಿತಿ ನೇತೃತ್ವದಲ್ಲಿ ಇಲ್ಲಿನ ನಾಗರೀಕರು ಪ್ರತಿಭಟನೆ ನಡೆಸಿ ಕಾಮಗಾರಿಯನ್ನು ತಡೆ ಹಿಡಿದಿದ್ದಾರೆ. ಈ ಬಗ್ಗೆ ಶಾಸಕರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಕಾಲೋನಿ ನಿವಾಸಿಗಳಲ್ಲಿ ಕೇಳಿ ಅನುದಾನ ಇಡುವುದಿಲ್ಲ. ಕ್ಷೇತ್ರದ ಆಯಾ ಪ್ರದೇಶದ ಎಲ್ಲಾ ಜನರಿಗೆ ಅನುಕೂಲವಾಗುವಂತೆ ಅನುದಾನವಿಟ್ಟು ಅಭಿವೃದ್ಧಿ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಶಾಸಕರಿಗೆ ದಲಿತರ ಮತಗಳು ಬೇಕು ಆದರೆ ದಲಿತರ ಕಾಲೋನಿಗೆ ಹೋಗುವ ರಸ್ತೆ ಅಭಿವೃದ್ಧಿ ಬೇಡ ಎಂದು ಆರೋಪಿಸಿದರು.
ಶಾಸಕರು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಪ. ಜಾತಿ ಪಂಗಡದ ಅಭಿವೃದ್ಧಿಗೆ ಸಿಗುವ ಅನುದಾನವನ್ನು ಬೇರೆಡೆಗೆ ವರ್ಗಾಯಿಸಿರುವ ಬಗ್ಗೆಯೂ ಅನುಮಾನ ಇದೆ. ಇವರು ಶಾಸಕರಾಗಿ 30 ವರ್ಷವಾದರೂ ವಿಧಾನ ಸಭಾ ಕ್ಷೇತ್ರದ ಹಲವಾರು ದಲಿತ ಕಾಲೋನಿಗಳು ಮಾತ್ರ ಅಭಿವೃದ್ಧಿ ಕಂಡಿಲ್ಲ. ಅವರಿಗೆ ಸುಳ್ಯದಲ್ಲಿ ಒಂದು ಅಂಬೇಡ್ಕರ್ ಭವನವನ್ನು ನಿರ್ಮಿಸಬೇಕಾದರೆ ಇಷ್ಟು ವರ್ಷಗಳು ಬೇಕಾಯ್ತ? ಇದರಿಂದ ಅವರ ರಾಜಕೀಯ ಇಚ್ಛಾಶಕ್ತಿ ಏನು ಎಂದು ತಿಳಿಯುತ್ತದೆ. ಅವರದೇ ಪಕ್ಷದ ಗ್ರಾಮ ಪಂಚಾಯತ್ ಸದಸ್ಯರ ಮಾತಿಗೂ ಬೆಲೆ ಕೊಡುತ್ತಿಲ್ಲ, ಅಲ್ಲದೇ ಅನುದಾನವನ್ನು ಮುಖ್ಯ ರಸ್ತೆಗೆ ಬಳಸಲು ಶಾಸಕರಿಗೆ ಬೇರೆಯವರು ಕುಮ್ಮುಕ್ಕು ನೀಡುತ್ತಿರುವುದು ಗೊತ್ತಾಗುತ್ತಿದೆ ಎಂದರು. ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಅನುದಾನ ಬೇರೆಡೆಗೆ ವರ್ಗಾಯಿಸಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಸೇಸಪ್ಪ ಬೆದ್ರಕಾಡು ಎಚ್ಚರಿಸಿದರು.