ನೆಲ್ಯಾಡಿ(ದಕ್ಷಿಣಕನ್ನಡ):ಸೆಲ್ಫಿ ಗೀಳಿಗೆ ಬಿದ್ದಿರುವ ಯುವಕರು ಅಪಾಯಕಾರಿ ಸ್ಥಳಗಳಲ್ಲಿ ಫೋಟೋ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಘಟನೆಗಳು ಹೆಚ್ಚುತ್ತಿವೆ. ಇಂಥದ್ದೇ ಘಟನೆಯೊಂದು ದಕ್ಷಿಣ ಕನ್ನಡದ ಗುಂಡ್ಯ ಹೊಳೆಯಲ್ಲಿ ನಡೆದಿದೆ.
ಸೆಲ್ಫಿ ವಿಡಿಯೋ ಮಾಡುತ್ತಿರುವ ವೇಳೆ ಯುವಕನೊಬ್ಬ ಗುಂಡ್ಯ ಹೊಳೆಯಲ್ಲಿ ಮುಳುಗಿ ಕಣ್ಮರೆಯಾಗಿದ್ದಾನೆ. ಯುವಕನನ್ನು ರಾಜಸ್ಥಾನ ಮೂಲದ ಸೀತಾರಾಮ್ ಎಂದು ಗುರುತಿಸಲಾಗಿದೆ.
ಗುಂಡ್ಯ ಹೊಳೆಯಲ್ಲಿ ಮುಳುಗಿ ಯುವಕ ಕಣ್ಮರೆ ಆಟೋಮೊಬೈಲ್ ಬಿಡಿಭಾಗಗಳ ಸಾಗಾಟ ಮಾಡುವ ರಾಜಸ್ಥಾನದ ಮೂಲದ ಯುವಕರಿಬ್ಬರು ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಗುಂಡ್ಯ ಹೊಳೆಗೆ ಇಳಿದಿದ್ದಾರೆ. ಒಬ್ಬ ನೀರಿನಲ್ಲಿ ಆಟವಾಡುತ್ತಾ ಬಂಡೆಯ ಮೇಲೆ ನಿಂತಿರುತ್ತಾನೆ. ಈ ವೇಳೆ ಇನ್ನೊಬ್ಬ ಮೊಬೈಲ್ನಲ್ಲಿ ದೃಶ್ಯವನ್ನು ಚಿತ್ರೀಕರಿಸುತ್ತಾ ಅವನ ಪಕ್ಕ ಬರುತ್ತಾನೆ. ಈ ವೇಳೆ ಸೆಲ್ಫಿ ವಿಡಿಯೋ ಮಾಡುತ್ತಿರುವಾಗ ಯುವಕನೊಬ್ಬ ಆಯತಪ್ಪಿ ನೀರಿಗೆ ಬೀಳುತ್ತಾನೆ. ಇದು ವಿಡಿಯೋದಲ್ಲಿ ಸೆರೆಯಾಗಿದೆ.
ವಿಷಯ ತಿಳಿದ ಸ್ಥಳೀಯರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಯುವಕನ ಪತ್ತೆಗಾಗಿ ನದಿಯಲ್ಲಿ ಹುಡುಕಾಟ ನಡೆಸಿದರೂ ಯುವಕ ಪತ್ತೆಯಾಗಿಲ್ಲ. ಕತ್ತಲು ಆವರಿಸಿರುವ ಹಿನ್ನೆಲೆಯಲ್ಲಿ ಮತ್ತು ಈ ಸ್ಥಳ ಅತ್ಯಂತ ಅಪಾಯಕಾರಿ ಆಗಿರುವ ಕಾರಣದಿಂದಾಗಿ ಹುಡುಕಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಗುರುವಾರ ಮತ್ತೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಉಪ್ಪಿನಂಗಡಿ ಠಾಣಾಥಿಕಾರಿ ಕುಮಾರ್ ಕಾಂಬ್ಲೇ ನೇತೃತ್ವದ ಪೊಲೀಸರ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.