ಮಂಗಳೂರು: ಲಾಕ್ಡೌನ್ ವೇಳೆ ಸಿಕ್ಕಿದ ರಜಾ ಸಮಯದಲ್ಲಿ ಮಜಾ ಮಾಡಿದ ವಿದ್ಯಾರ್ಥಿಗಳ ನಡುವೆ ಪುತ್ತೂರಿನ ವಿದ್ಯಾರ್ಥಿಗಳ ತಂಡವೊಂದು ವಿಶಿಷ್ಟ ಕಾರ್ಯವೊಂದನ್ನು ಮಾಡಿದೆ.
ಪುತ್ತೂರು ವಿದ್ಯಾರ್ಥಿಗಳಿಂದ ಸೀಡ್ಸ್ ಆಫ್ ಹೋಪ್ ಕೇಶದಾನ ಅಭಿಯಾನ ಹೌದು, ಚಿಕಿತ್ಸೆಯ ವೇಳೆ ಕೂದಲು ಕಳೆದುಕೊಂಡ ಕ್ಯಾನ್ಸರ್ ರೋಗಿಗಳಲ್ಲಿ ಭರವಸೆಯ ನಗು ಮೂಡಿಸುವ ನಿಟ್ಟಿನಲ್ಲಿ 9 ವಿದ್ಯಾರ್ಥಿಗಳು ಕೇಶದಾನ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಕ್ಯಾನ್ಸರ್ ರೋಗಿಗಳಿಗೆ ಕಿಮೋ ಥೆರಪಿ ಚಿಕಿತ್ಸೆ ಬಳಿಕ ಕೂದಲು ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ. ಇದರಿಂದ ಅವರು ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಇಂತವರಿಗೆ ಕೇಶದಾನ ಮಾಡುವ ಮೂಲಕ ಅವರಲ್ಲಿ ಧೈರ್ಯ ತುಂಬುವ ಕೆಲಸಕ್ಕೆ ಈ ವಿದ್ಯಾರ್ಥಿಗಳು ಕೈ ಹಾಕಿದ್ದಾರೆ.
ಆದ್ಯ ಸುಲೋಚನ ಮುಳಿಯ, ಇಷಾ ಸುಲೋಚನ ಮುಳಿಯ, ವರ್ಷ ಭಟ್, ನೇಹ ಭಟ್, ಅಕ್ಷಯ ಪಾರ್ವತಿ ಸರೋಳಿ, ಸಮರ್ಥರಾಮ ಮುಳಿಯ, ಕೌಶಲ್ ಎಸ್.ವೈ., ಕನ್ಯ ಸಚಿನ್ ಶೆಟ್ಟಿ ಮತ್ತು ಹಿತ ಕಜೆ ಎಂಬ ಪುತ್ತೂರು ತಾಲೂಕಿನ ವಿದ್ಯಾರ್ಥಿಗಳು ಒಟ್ಟಿಗೆ ಸೇರಿ ಕ್ಯಾನ್ಸರ್ ರೋಗಿಗಳಿಗೆ ಕೇಶದಾನ ಮಾಡಲು ನಿರ್ಧರಿಸಿದ್ದಾರೆ. ಅಲ್ಲದೇ ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ವಿದ್ಯಾರ್ಥಿಗಳು ಸೀಡ್ಸ್ ಆಫ್ ಹೋಪ್ ಎಂಬ ಸಂಸ್ಥೆ ಆರಂಭಿಸಿ ಇದರ ಮೂಲಕ ಕೇಶದಾನದ ಬಗ್ಗೆ ಜಾಗೃತಿ ಮಾಡುತ್ತಿದ್ದಾರೆ. ಈಗಾಗಲೇ ತಂಡದ ಕೆಲ ಸದಸ್ಯರು ಕೇಶದಾನ ಮಾಡಿದ್ದು, ಇನ್ನು ಕೆಲವರು ಕೇಶದಾನಕ್ಕಾಗಿ ಬೇಕಾದ ಅಳತೆಯಷ್ಟು ಕೇಶ ಬೆಳೆಯಲು ಕಾಯುತ್ತಿದ್ದಾರೆ. ಡಿ. 20ರಂದು ಪುತ್ತೂರಿನಲ್ಲಿ ಕೇಶದಾನದ ಕ್ಯಾಂಪ್ ಮಾಡಲಾಗಿದ್ದು, ಇದರಲ್ಲಿ 50ಕ್ಕೂ ಜನರು ಕೇಶದಾನ ಮಾಡಲು ಮುಂದೆ ಬಂದಿದ್ದಾರೆ.
ಇವರು ಆಯೋಜಿಸುವ ಕ್ಯಾಂಪ್ಗಳಲ್ಲಿ ಕತ್ತರಿಸಿದ ಕೂದಲನ್ನು ಚೆನ್ನೈಗೆ ಕಳುಹಿಸಿ ಅಲ್ಲಿ ಅದನ್ನು ವಿಗ್ ಮಾಡಿಸಿ ಮತ್ತೆ ಪುತ್ತೂರಿಗೆ ತರಿಸಿ ಅಗತ್ಯವಿರುವ ಪುತ್ತೂರಿನ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ನೀಡುವುದು ಇವರ ಉದ್ದೇಶ. ಈ ವಿದ್ಯಾರ್ಥಿಗಳ ಸಾಮಾಜಿಕ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ.