ಮಂಗಳೂರು : ನಗರದ ಹೊರವಲಯದ ಸುರತ್ಕಲ್ನ ಎನ್ಐಟಿಕೆ ಟೋಲ್ ಗೇಟ್ ತೆರವಿಗಾಗಿ ಶನಿವಾರ ಬೆಳಗ್ಗೆ ಆರಂಭವಾದ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಗೆ ಭಾನುವಾರ ಯುವಕಾಂಗ್ರೆಸ್ ರಾಜ್ಯಾಧ್ಯಕ್ಷ ಮುಹಮ್ಮದ್ ನಲ್ಪಾಡ್ ಆಗಮಿಸಿ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತವರಿನಲ್ಲಿ ಅಕ್ರಮವಾಗಿ ಟೋಲ್ ಸುಲಿಗೆ ನಡೆಯುತ್ತಿರುವುದು 40 ಪರ್ಸೆಂಟ್ ಸದರ್ಕಾರದ ನೀತಿಗೆ ಅನುಗುಣವಾಗಿಯೇ ಇದೆ. ಟೋಲ್ ಗೇಟ್ ತೆರವು ಆಗುವವರೆಗೆ ಯುವ ಕಾಂಗ್ರೆಸ್ ಈ ಹೋರಾಟದಲ್ಲಿ ಜೊತೆಯಾಗಿರಲಿದೆ ಎಂದು ಹೇಳಿದರು.
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಹ ಸಂಚಾಲಕ ವೈ ರಾಘವೇಂದ್ರ ರಾವ್ ಮಾತನಾಡಿ, ಸುರತ್ಕಲ್ ಅಕ್ರಮ ಟೋಲ್ ಗೇಟ್ ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಜನವಿರೋಧಿ ಆಡಳಿತದ ಸಂಕೇತವಾಗಿ ರಾರಾಜಿಸುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರ ಒಕ್ಕೊರಲ ಆಗ್ರಹದ ಹೊರತಾಗಿಯೂ ಟೋಲ್ ಕೇಂದ್ರ ಮುಚ್ಚದಿರುವುದನ್ನು ಖಂಡಿಸುತ್ತೇವೆ. ಇದರ ಹಿಂದೆ ಭ್ರಷ್ಟಾಚಾರ, ಕಮೀಷನ್, ಖಾಸಗಿ ಕಂಪನಿಗಳ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ. ಬಿಜೆಪಿ ಸರ್ಕಾರ ಅಂತಹ ನೀತಿಗಳ ಪರ ನಿಂತಿರುವುದು ಇಂದು ಜನಸಾಮಾನ್ಯರಿಗೂ ಅರ್ಥವಾಗುತ್ತಿದೆ. ಜನಪರ ಕಾರ್ಯಗಳಿಗೆ ಬೆನ್ನು ತಿರುಗಿಸುವ ಬಿಜೆಪಿ ಸಂಸದ ಮತ್ತು ಶಾಸಕರುಗಳ ಬಣ್ಣ ಸುರತ್ಕಲ್ ಟೋಲ್ ಗೇಟ್ ಮುಂಭಾಗ ಕರಗತೊಡಗಿದೆ ಎಂದು ಆರೋಪಿಸಿದರು.