ಕರ್ನಾಟಕ

karnataka

ETV Bharat / state

ಎಚ್ಚರ ತಪ್ಪಿದ್ರೆ ಅಪಾಯ.. ಮೂಲಭೂತ ಸೌಕರ್ಯಗಳಿಂದ ವಂಚಿತ ಕುಕ್ಕೆ ಸುಬ್ರಹ್ಮಣ್ಯ ರೈಲು ನಿಲ್ದಾಣ - ಸುಬ್ರಮಣ್ಯ ರಸ್ತೆ ರೈಲು ನಿಲ್ದಾಣ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಸುಬ್ರಹ್ಮಣ್ಯ ರೋಡ್ ಅಥವಾ ನೆಟ್ಟಣ ರೈಲು ನಿಲ್ದಾಣದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ನಡೆಯದೇ ಇರುವುದರಿಂದ ರೈಲ್ವೆ ಪ್ರಯಾಣಿಕರು ಪ್ರತಿದಿನ ಸಂಕಷ್ಟ ಅನುಭವಿಸುತ್ತಿದ್ದಾರೆ.

problems-of-kukke-subramanya-railway-station
ಎಚ್ಚರ ತಪ್ಪಿದ್ರೆ ಅಪಾಯ.. ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಕುಕ್ಕೆ ಸುಬ್ರಹ್ಮಣ್ಯ ರೈಲು ನಿಲ್ದಾಣ

By

Published : Dec 21, 2021, 10:58 AM IST

Updated : Dec 21, 2021, 12:46 PM IST

ಸುಬ್ರಮಣ್ಯ(ದಕ್ಷಿಣ ಕನ್ನಡ):ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಪ್ರಯಾಣಿಕರು ಸಂಪರ್ಕಿಸುವ ರೈಲು ನಿಲ್ದಾಣಗಳ ಸಾಲಿನಲ್ಲಿ ಬರುವ ಸುಬ್ರಹ್ಮಣ್ಯ ರೋಡ್ ಅಥವಾ ನೆಟ್ಟಣ ರೈಲು ನಿಲ್ದಾಣದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ನಡೆಯದೇ ಇರುವುದರಿಂದ ರೈಲ್ವೆ ಪ್ರಯಾಣಿಕರು ಪ್ರತಿದಿನ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.

ದೇಶದ ಹಾಗೂ ರಾಜ್ಯದ ಪ್ರಸಿದ್ಧ ಯಾತ್ರಾ ಕ್ಷೇತ್ರಗಳಾದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ರೈಲುಮಾರ್ಗದ ಮುಖಾಂತರ ಆಗಮಿಸುವ ಪ್ರವಾಸಿಗರು ಸುಬ್ರಹ್ಮಣ್ಯ ರೋಡ್ ರೈಲ್ವೆ ನಿಲ್ದಾಣದಲ್ಲಿ ಇಳಿಯಬೇಕಾಗುತ್ತದೆ. ಆದರೆ ಸರಿಯಾದ ಮೂಲಸೌಕರ್ಯ ಇರದ ಕಾರಣಕ್ಕೆ ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲ್ವೆ ನಿಲ್ದಾಣದಲ್ಲಿ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗಿದೆ.

ಸುಬ್ರಮಣ್ಯ ರೋಡ್ ರೈಲು ನಿಲ್ದಾಣ

ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ಪ್ಲಾಟ್‌ಫಾರಂ ನಿರ್ಮಿಸಲಾಗಿದ್ದರೂ ಪಾದಚಾರಿ ಮೇಲ್ಸೇತುವೆ ಇನ್ನೂ ನಿರ್ಮಾಣಗೊಂಡಿಲ್ಲ. ಎರಡು ವರ್ಷಗಳ ಹಿಂದೆ ಈ ಬಗ್ಗೆ ಟೆಂಡರ್ ನಡೆದರೂ ಕಾಮಗಾರಿ ನಡೆಸದೇ ಇರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಪಾದಚಾರಿ ಮೇಲ್ಸೇತುವೆ ಇಲ್ಲದೇ ಇರುವುದರಿಂದ ಇನ್ನೊಂದು ಬದಿಯ ಪ್ಲಾಟ್‌ಫಾರಂನಲ್ಲಿ ಬಂದಿಳಿಯುವ ಮಕ್ಕಳು, ವೃದ್ಧರ ಸಹಿತ ಪ್ರಯಾಣಿಕರು ರೈಲ್ವೆ ಹಳಿಗೆ ಇಳಿದು ಹಳಿಯಲ್ಲೇ ನಡೆದುಕೊಂಡು ಬಂದು, ಎದುರು ಭಾಗದ ಪ್ಲಾಟ್‌ಫಾರಂನ್ನು ತ್ರಾಸದಾಯಕವಾಗಿ ಹತ್ತಬೇಕಾಗಿದೆ.

ರೈಲ್ವೆ ಪ್ಲಾಟ್​ಫಾರ್ಮ್

ಅಲ್ಲದೇ ಜೀವದ ಹಂಗು ತೊರೆದು ಪ್ರಯಾಣಿಕರು ನಿತ್ಯ ಸಂಕಷ್ಟ ಅನುಭವಿಸುತ್ತಿರುತ್ತಾರೆ ಎಂಬ ಆರೋಪ ವ್ಯಕ್ತವಾಗಿದೆ. ಈತನಕ ಎರಡನೇ ಪ್ಲಾಟ್‌ಫಾರಂನಲ್ಲಿ ಪ್ರಯಾಣಿಕರಿಗೆ ನಿಲ್ಲಲೂ ಯಾವುದೇ ವ್ಯವಸ್ಥೆ ಮಾಡಲಾಗಿಲ್ಲ. ಯಾವ ಕಾರಣಕ್ಕೆ ಈ ಕಾಮಗಾರಿಗಳು ಅರ್ಧಕ್ಕೆ ನಿಂತಿದೆ ಎಂಬ ಬಗ್ಗೆಯೂ ಯಾರಲ್ಲಿಯೂ ಸ್ಪಷ್ಟ ಮಾಹಿತಿ ಇಲ್ಲ. ರಾತ್ರಿ ಸಮಯದಲ್ಲಿ ಇಲ್ಲಿ ರೈಲು ಬಂದಾಗ ಟಿಕೆಟ್​ ನೀಡುವ ವ್ಯವಸ್ಥೆ ಇಲ್ಲ. ಕೌಂಟರ್ ಇದ್ದರೂ ಟಿಕೇಟ್ ನೀಡಲು ಆದೇಶ ಇಲ್ಲ ಎನ್ನಲಾಗಿದೆ.

ಯಾತ್ರಾರ್ಥಿಗಳು ಮಾಹಿತಿ ಕೊರತೆಯಿಂದ ರಾತ್ರಿ ವೇಳೆ ನಿಲ್ಧಾಣಕ್ಕೆ ಬಂದಲ್ಲಿ ಟಿಕೆಟ್ ಆಲಭ್ಯತೆಯಿಂದ ನಿಲ್ದಾಣದಲ್ಲೇ ಯಾವುದೇ ಸಂರಕ್ಷಣಾ ವ್ಯವಸ್ಥೆ ಇಲ್ಲದೇ ರಾತ್ರಿ ಕಳೆಯಬೇಕಾಗಿದೆ. ಅಧಿಕಾರಿಗಳು ಹೇಳುವಂತೆ ಕೆಲವು ರೈಲುಗಳಿಗೆ ಟಿಕೆಟ್ ನೀಡಲಾಗುತ್ತಿದೆ. ಆದರೆ ಆಗಬೇಕಿರುವುದೇ ಬೇರೆ ಎಂಬ ಮಾತು ಕೇಳಿ ಬಂದಿದೆ.

ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹ

ಬಿಜಾಪುರ್ ಎಕ್ಸ್‌ಪ್ರೆಸ್, ಕಾರವಾರ-ಬೆಂಗಳೂರು, ಮಂಗಳೂರು-ಬೆಂಗಳೂರು, ಕಣ್ಣೂರು-ಬೆಂಗಳೂರು ಹೀಗೆ ನಾಲ್ಕೈದು ಕಡೆಗಳ ರೈಲುಗಳು ಇಲ್ಲಿ ರಾತ್ರಿ ಹಾಗೂ ಹಗಲಲ್ಲಿ ನಿಲ್ಲಬೇಕಾಗಿದ್ದು, ಇವುಗಳಿಗೆ ಇಲ್ಲೇ ಟಿಕೆಟ್ ನೀಡುವ ವ್ಯವಸ್ಥೆ ಆಗಬೇಕೆಂಬುದು ಬೇಡಿಕೆ. ತುರ್ತು ವೈದ್ಯಕೀಯ ಕೇಂದ್ರ, ಮೆಡಿಕಲ್ ವ್ಯವಸ್ಥೆಗಳು ಇಲ್ಲಿ ಇಲ್ಲ. ದೂರದ ಕಡಬ ಅಥವಾ ಸುಬ್ರಹ್ಮಣ್ಯಕ್ಕೆ ತೆರಳಬೇಕಾದ ಪರಿಸ್ಥಿತಿ ಇಲ್ಲಿದೆ.

ವೈದ್ಯಕೀಯ ಕೇಂದ್ರ ಇದ್ದರೂ ಸಿಬ್ಬಂದಿ ಪುತ್ತೂರಿನಿಂದ ಮೂರು ದಿನಕ್ಕೊಮ್ಮೆ ಇಲ್ಲಿಗೆ ಬರುವುದು ಎಂದು ತಿಳಿದುಬಂದಿದ್ದು, ಖಾಯಂ ಆಗಿ ಇಲ್ಲಿಯೇ ವೈದ್ಯರು ಹಾಗೂ ಔಷಧಿ ವಿತರಣೆ ವ್ಯವಸ್ಥೆ ಕಲ್ಪಿಸಬೇಕೆಂಬುದು ಪ್ರಯಾಣಿಕರ ಆಗ್ರಹವಾಗಿದೆ. ಈಗಾಗಲೇ ಇಲ್ಲಿ ಹೊಸದಾಗಿ ನಿರ್ಮಿಸಿರುವ ಶೌಚಾಲಯ ಕಾಮಗಾರಿ ಆರಂಭಿಸಿ ಒಂದು ವರ್ಷ ಕಳೆದರೂ ಕಾಮಗಾರಿ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ಬಸ್ ತಂಗುದಾಣ, ಅಟೋ ರಿಕ್ಷಾ, ಟೂರಿಸ್ಟ್ ವಾಹನ ತಂಗುದಾಣ ವ್ಯವಸ್ಥೆಗಳೂ ಇಲ್ಲಿ ಇಲ್ಲದಾಗಿದ್ದು, ಈ ಬಗ್ಗೆಯೂ ವ್ಯವಸ್ಥೆ ಕಲ್ಪಿಸಬೇಕಾಗಿದೆ.

ಕಡಬ, ಸುಳ್ಯ ತಾಲೂಕು ವ್ಯಾಪ್ತಿಯಿಂದ ಇಲ್ಲಿಗೆ ಆಗಮಿಸುವ ಸ್ಥಳೀಯ ಪ್ರಯಾಣಿಕರಿಗೆ ಕಡಬ ತಾಲೂಕಿನ ಮೂರೇ ಕಿ.ಮೀ ದೂರದಲ್ಲಿರುವ ಕೋಡಿಂಬಾಳ ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆ ವ್ಯವಸ್ಥೆಯಾದಲ್ಲಿ, ಸುಬ್ರಹ್ಮಣ್ಯ ರೋಡ್ ನಿಲ್ದಾಣದಲ್ಲಿ ಜನಸಂದಣಿ ಕಡಿಮೆಯಾಗುತ್ತದೆ. ಆದರೆ ಹಲವಾರು ಪ್ರತಿಭಟನೆಗಳು ನಡೆದರೂ ಈ ವ್ಯವಸ್ಥೆ ಇನ್ನೂ ಆಗಿಲ್ಲ. ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣವನ್ನು ಆದರ್ಶ ರೈಲು ನಿಲ್ದಾಣ ಪುತ್ತೂರಿನಂತೆಯೇ ಅಭಿವೃದ್ಧಿಗೊಳಿಸಿ, ಕೋಡಿಂಬಾಳದಲ್ಲಿ ಕನಿಷ್ಠ ಪಕ್ಷ ರೈಲು ನಿಲುಗಡೆಯಾದರೂ ಮಾಡಬೇಕೆಂಬ ಕೂಗು ಹೆಚ್ಚಾಗಿದೆ.

ಈ ತರಹ ಆದಲ್ಲಿ ಇಲ್ಲಿನ ಬೇಡಿಕೆಗಳು ವ್ಯವಸ್ಥಿತವಾಗಿ ಈಡೇರಬಹುದು. ಪ್ರಸ್ತುತ ನೆಟ್ಟಣದ ರೈಲ್ವೆ ನಿಲ್ದಾಣಕ್ಕೆ ಸುಬ್ರಹ್ಮಣ್ಯ ರೋಡ್ ನಿಲ್ದಾಣವೆಂಬ ಹೆಸರಿದ್ದು, ಇದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಸಮೀಪದಲ್ಲಿ ಇರುವುದರಿಂದ ಅದೇ ಹೆಸರು ಎಲ್ಲೆಡೆ ಜನಜನಿತವಾಗಿರುವುದರಿಂದ ಇಲ್ಲಿನ ರೈಲ್ವೆ ನಿಲ್ದಾಣಕ್ಕೂ ಕುಕ್ಕೆ ಸುಬ್ರಹ್ಮಣ್ಯ ರೋಡ್ ರೈಲ್ವೆ ನಿಲ್ದಾಣ ಎಂಬ ಹೆಸರನ್ನು ಮರು ನಾಮಕರಣ ಮಾಡುವಂತೆಯೂ ಪ್ರಸ್ತಾಪನೆಯನ್ನು ಸಲಹಾ ಸಮಿತಿಯವರು ಸಲ್ಲಿಸಿದ್ದಾರೆ. ಇನ್ನಾದರೂ ಈ ಬೇಡಿಕೆಗಳನ್ನು ಈಡೇರಿಸುವಲ್ಲಿ ರೈಲ್ವೆ ಇಲಾಖೆ ಮುಂದಾಗಲಿ ಎಂಬುದೇ ಎಲ್ಲರ ಆಶಯ.

ಇದನ್ನೂ ಓದಿ:ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ಗೆ ಮಸಿ ಬಳಿದು ಮತ್ತೆ ಎಂಇಎಸ್​ ಉದ್ಧಟತನ

Last Updated : Dec 21, 2021, 12:46 PM IST

ABOUT THE AUTHOR

...view details