ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ(ಸೆ. 2) ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಅವರು ಕೂಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆ ಮಂಗಳೂರಿನಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
3 ಸಾವಿರ ಪೊಲೀಸರ ನಿಯೋಜನೆ: ಪ್ರಧಾನಮಂತ್ರಿ ಅವರ ಭದ್ರತಾ ಕಾರ್ಯಕ್ಕಾಗಿ 3 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಮಂಗಳೂರು ನಗರ ಪೊಲೀಸರು, ವಿವಿಧ ಜಿಲ್ಲೆಗಳ ಪೊಲೀಸರು, ಎಎನ್ಎಫ್, ಕೆಎಸ್ಆರ್ಪಿ ಪೊಲೀಸರು ಸೇರಿದಂತೆ 3 ಸಾವಿರ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ಡಿಜಿಪಿ, ಎಡಿಜಿಪಿ ಸೇರಿದಂತೆ 100 ಪೊಲೀಸ್ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.
ಗೃಹಸಚಿವ ಆರಗ ಜ್ಞಾನೇಂದ್ರ ಅವರು ಗುರುವಾರ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿ, ಭದ್ರತೆ ಪರಿಶೀಲನೆ ನಡೆಸಿದರು. ಎಡಿಜಿಪಿ ಅಲೋಕ್ ಕುಮಾರ್ ಅವರು ವೇದಿಕೆ ಸ್ಥಳದಲ್ಲಿ ಪೊಲೀಸರು ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂಬುದರ ಬಗ್ಗೆ ನಿರ್ದೆಶನ ನೀಡಿದರು.
ಗೃಹಸಚಿವ ಆರಗ ಜ್ಞಾನೇಂದ್ರ ಪರಿಶೀಲನೆ ಈ ಸಂದರ್ಭದಲ್ಲಿ ಮಾತನಾಡಿದ ಗೃಹಸಚಿವ ಆರಗ ಜ್ಞಾನೇಂದ್ರ, ಪ್ರಧಾನಿಯವರ ಭದ್ರತೆಗೆ ಬೇಕಾಗಿರುವ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಕೆಎಸ್ಆರ್ಪಿ, ಸಿಎಐಆರ್, ಡಿಐಆರ್, ಆರ್ಎಎಫ್, ಗರುಡ ಪಡೆ ಸೇರಿದಂತೆ 3 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಭದ್ರತೆಯಲ್ಲಿ ಯಾವ ಲೋಪವಾಗದಂತೆ ಮುತುವರ್ಜಿಯಿಂದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಸಾರ್ವಜನಿಕ ಸಮಾವೇಶ:ಪ್ರಧಾನಿ ನರೇಂದ್ರ ಮೋದಿ ಅವರು ಎನ್ ಎಂ ಪಿ ಎ ಮತ್ತು ಎಂ ಆರ್ ಪಿ ಎಲ್ನ ಎರಡು ಯೋಜನೆಗಳ ಉದ್ಘಾಟನೆ ಮತ್ತು 6 ಯೋಜನೆಗಳ ಶಿಲಾನ್ಯಾಸಕ್ಕೆ ನಾಳೆ ಮಂಗಳೂರಿಗೆ ಆಗಮಿಸಲಿದ್ದಾರೆ. ನಗರದ ಹೊರವಲಯದ ಕೂಳೂರು ಗೋಲ್ಡ್ ಪಿಂಚ್ ಸಿಟಿ ಮೈದಾನದಲ್ಲಿ ಪ್ರಧಾನಿಯವರಿಂದ ಸಾರ್ವಜನಿಕ ಸಮಾವೇಶ ಆಯೋಜಿಸಲಾಗಿದೆ.
ಜರ್ಮನ್ ತಂತ್ರಜ್ಞಾನದ ಬೃಹತ್ ಪೆಂಡಾಲ್: ಪ್ರಧಾನಿ ಕಾರ್ಯಕ್ರಮಕ್ಕೆ ಗೋಲ್ಡ್ ಪಿಂಚ್ ಸಿಟಿಯ 25 ಎಕರೆ ಪ್ರದೇಶದಲ್ಲಿ ಜರ್ಮನ್ ತಂತ್ರಜ್ಞಾನದ ಬೃಹತ್ ಪೆಂಡಾಲ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಸಮಾವೇಶ ನಡೆಯುವ ಸ್ಥಳದಲ್ಲಿ ಸಾವಿರಾರು ಕಾರ್ಮಿಕರಿಂದ ಕೆಲಸ ಕಾರ್ಯ ನಡೆಯುತ್ತಿದ್ದು, ಮೈದಾನದ ಸುತ್ತ ತಡೆ ಬೇಲಿ ಅಳವಡಿಕೆ ಕಾರ್ಯ ಆಗುತ್ತಿದೆ. ಸ್ಟೀಲ್ ಶೀಟ್ಗಳ ಮೇಲೆ ಬಿಳಿ ಬಟ್ಟೆ ಹಾಕಿ ತಡೆಬೇಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ:ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಎಸ್ ಪಿ ಜಿ ಅಧಿಕಾರಿಗಳು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಯಕ್ರಮಕ್ಕೆ ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಮೈದಾನದಲ್ಲಿ ಸಿದ್ಧತೆ ಮಾಡಲಾದ ಪೆಂಡಾಲ್ ಒಳಗೆ 80 ಸಾವಿರ ಜನ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಬಂದ ಜನರಿಗೆ ಊಟೋಪಚಾರದ ವ್ಯವಸ್ಥೆ, ಬಸ್ ವ್ಯವಸ್ಥೆ, ಮೈದಾನದ ಸುತ್ತ ಹತ್ತು ಕಡೆ ಪಾರ್ಕಿಂಗ್ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ.
ಇದನ್ನೂ ಓದಿ:ಸೆ.2 ರಂದು ಮಂಗಳೂರಿಗೆ ಪ್ರಧಾನಿ ಮೋದಿ: ವಿವಿಧ ಯೋಜನೆಗಳ ಲೋಕಾರ್ಪಣೆ, ಶಿಲಾನ್ಯಾಸ
ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಸರ್ಕಾರಿ ಕಾರ್ಯಕ್ರಮದ ನಿಮಿತ್ತ ಮಂಗಳೂರಿಗೆ ಬರುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ 2 ಯೋಜನೆ ಉದ್ಘಾಟನೆ, 6 ಯೋಜನೆಗಳ ಶಿಲಾನ್ಯಾಸ ಸೇರಿದಂತೆ ಕೇಂದ್ರ, ರಾಜ್ಯ ಯೋಜನೆಗಳ ಫಲಾನುಭವಿಗಳಿಗೆ ಯೋಜನೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.