ಪುತ್ತೂರು:ಲಾಕ್ಡೌನ್ ಹಿನ್ನೆಲೆ ದಾರಿಯಲ್ಲಿ ಸಿಕ್ಕ ಕೊಳೆತ ಹಣ್ಣುಗಳನ್ನು ಸೇವಿಸುತ್ತಲೇ ಸ್ವಗ್ರಾಮಕ್ಕೆ ತೆರಳುತ್ತಿದ್ದ ವ್ಯಕ್ತಿಯ ಸಹಾಯಕ್ಕೆ ಪೊಲೀಸರು ದೌಡಾಯಿಸಿರುವ ಘಟನೆ ಪುತ್ತೂರು ತಾಲೂಕಿನ ಸಂಟ್ಯಾರು ಚೆಕ್ ಪಾಯಿಂಟ್ ಬಳಿ ನಡೆದಿದೆ.
ಹಸಿವಿನಿಂದ ಕಂಗಾಲಾಗಿದ್ದವರಿಗೆ ತಮಗೆ ತಂದಿದ್ದ ಊಟವನ್ನೇ ನೀಡಿದ ಪೊಲೀಸರು!
ಹಸಿವಿನಿಂದ ಕಂಗಾಲಾಗಿದ್ದವರಿಗೆ ಪೊಲೀಸರು ತಮಗೆ ತಂದಿದ್ದ ಆಹಾರವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಮಡಿಕೇರಿಯ ರಾಣಿಪೇಟೆ ನಿವಾಸಿಯೊಬ್ಬರು ಕಳೆದ 5 ದಿನಗಳ ಹಿಂದೆ ಕೆಲಸಕ್ಕೆಂದು ಮಂಗಳೂರಿಗೆ ಬಂದಿದ್ದರು. ಲಾಕ್ಡೌನ್ ಪರಿಣಾಮ ಕೆಲಸವಿಲ್ಲದೆ ಊರಿಗೆ ವಾಪಸಾಗಲು ಬಸ್ಸಿನ ಸೌಕರ್ಯವೂ ಇಲ್ಲದೆ ಮಂಗಳೂರಿನಿಂದ ಮಡಿಕೇರಿಗೆ ನಡೆದುಕೊಂಡು ತೆರಳುತ್ತಿದ್ದರು. ಎರಡು ದಿನಗಳಿಂದ ಊಟ ಮಾಡದೇ ಹಸಿವಿನಿಂದ ಬಾವಲಿ ಹಾಗೂ ಹಕ್ಕಿಗಳು ತಿಂದು ಬಿದ್ದಂತಹ ಮಾವಿನಹಣ್ಣನ್ನು ತಿನ್ನುತ್ತಿರುವ ಬಗ್ಗೆ ಪೊಲೀಸ್ ಕಾನ್ಸ್ಟೇಬಲ್ಗಳಾದ ದಯಾನಂದ ಹಾಗೂ ಕಿರಣ್ಗೆ ತಿಳಿದಿದೆ.
ಪೊಲೀಸರಿಬ್ಬರು ಕೂಡಲೇ ಸ್ಪಂದಿಸಿ ಹಸಿವಿನಿಂದ ಕಂಗಾಲಾಗಿದ್ದ ಆತನಿಗೆ ತಮಗಾಗಿ ತಂದ ಆಹಾರವನ್ನು ನೀಡಿದ್ದಾರೆ. ಬಳಿಕ ಆತನನ್ನು ವಾಹನವೊಂದರಲ್ಲಿ ಮಡಿಕೇರಿಗೆ ಕಳುಹಿಸಿಕೊಟ್ಟಿದ್ದಾರೆ. ಲಾಕ್ಡೌನ್ನಂತಹ ಸಂಕಷ್ಟದ ಸಮಯದಲ್ಲಿ ತಮ್ಮ ಕರ್ತವ್ಯದೊಂದಿಗೆ ಮಾನವೀಯತೆಯನ್ನು ಮೆರೆದ ಈ ಸಿಬ್ಬಂದಿಯ ಕಾರ್ಯ ಎಲ್ಲರಿಗೂ ಆದರ್ಶನೀಯವಾಗಿದೆ.