ಪುತ್ತೂರು(ದಕ್ಷಿಣಕನ್ನಡ): ಕಂಬಳ ಕೂಟ ವಿಷಯ ಕುರಿತಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ತೀರ್ಪನ್ನು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಕಾಯ್ದಿರಿಸಿದೆ. ಕಂಬಳ ಕೂಟವನ್ನು ನಿಷೇಧಿಸುವಂತೆ ಆಗ್ರಹಿಸಿ ಪ್ರಾಣಿದಯಾ ಸಂಘದವರು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳ ಸಮಿತಿಯು ಸುಪ್ರೀಂಕೋರ್ಟ್ನಲ್ಲಿ ತಕರಾರು ಅರ್ಜಿ ಸಲ್ಲಿಸಿತ್ತು.
ಕಂಬಳ ಕೂಟದಲ್ಲಿ ಪ್ರಾಣಿ ಹಿಂಸೆ ನಡೆಯುತ್ತಿರುವುದರಿಂದ ಕಂಬಳ ಆಯೋಜನೆಗೆ ನಿಷೇಧ ಹೇರಬೇಕು ಎಂದು ಪ್ರಾಣಿದಯಾ ಸಂಘ ನಿರಂತರವಾಗಿ ಹೋರಾಟ ನಡೆಸುತ್ತಿದೆ. ಇದರ ವಿರುದ್ಧ ವಿಜಯ ವಿಕ್ರಮ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಅವರು ಕಾನೂನು ಹೋರಾಟ ನಡೆಸುತ್ತಿದ್ದರು. ಈ ಬಗ್ಗೆ ಸಲ್ಲಿಕೆಯಾಗಿರುವ ತಕರಾರು ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ತೀರ್ಪನ್ನು ಕಾಯ್ದಿರಿಸಿದೆ.
ಈ ಹಿಂದೆ ರಾಷ್ಟ್ರಪತಿಯವರು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಕಂಬಳ ಕೂಟಕ್ಕೆ ಅವಕಾಶ ಕಲ್ಪಿಸಿದ್ದರು. ಇದರಿಂದಾಗಿ ಕರ್ನಾಟಕದ ಕರಾವಳಿ ಭಾಗದಲ್ಲಿ ನಿರಾತಂಕವಾಗಿ ಕಂಬಳ ಕೂಟ ನಡೆಯುತ್ತಿತ್ತು. ಈ ಮಧ್ಯೆ, ಪ್ರಾಣಿದಯಾ ಸಂಘದವರು ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು ಕಂಬಳವನ್ನು ನಿಷೇಧಿಸಬೇಕು ಎಂದು ಮೇಲ್ಮನವಿ ಸಲ್ಲಿಸಿದ್ದರು. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತಕರಾರು ಅರ್ಜಿ ಸಲ್ಲಿಕೆಯಾಗಿತ್ತು.