ಪುತ್ತೂರು (ದ.ಕ):ದೇಶಕ್ಕಾಗಿ ವರ್ಷದ 365 ದಿನಗಳಲ್ಲೂ ಹಗಲು ರಾತ್ರಿಯೆನ್ನದೆ ಅವಿರತ ಶ್ರಮ ಪಡುತ್ತಿರುವ ಮತ್ತು ದೇಶಕ್ಕಾಗಿ ಆತ್ಮಾರ್ಪಣೆ ಮಾಡಿಕೊಳ್ಳುವ ಸೈನಿಕರು, ದೇಶ ರಕ್ಷಣೆಯ ಪವಿತ್ರ ಕಾರ್ಯ ಮಾಡುತ್ತಿದ್ದಾರೆ. ಅವರನ್ನು ಗೌರವಿಸುವುದು ಭಾರತೀಯ ಪ್ರಜೆಗಳ ಕರ್ತವ್ಯ ಎಂದು ಯುವ ವಾಗ್ಮಿ ಅಕ್ಷಯ ಗೋಖಲೆ ಹೇಳಿದರು.
ನಗರದ ಕಿಲ್ಲೆ ಮೈದಾನದ ಬಳಿಯಲ್ಲಿರುವ ಅಮರ್ ಜವಾನ್ ಜ್ಯೋತಿಯ ಬಳಿ, ಚೀನಾ ಗಡಿಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಶ್ರದ್ಧಾಂಜಲಿ ಮತ್ತು ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಡಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಪುತ್ತೂರಿನಲ್ಲಿ ಶ್ರದ್ಧಾಂಜಲಿ ಸಲ್ಲಿಕೆ ಈ ದೇಶದ ಚರಿತ್ರೆಯನ್ನು ಅವಲೋಕಿಸಿದಾಗ 1967ರಲ್ಲಿ ಚೀನಾ ಭಾರತದ ಮೇಲೆ ಆಕ್ರಮಣ ಮಾಡಿದಾಗ ಶಸ್ತ್ರಾಸ್ತ್ರಗಳ ಕೊರತೆಯಿಂದಾಗಿ ನಮ್ಮ ಸೈನಿಕರು ಬಲಿದಾನ ಮಾಡಬೇಕಾಯಿತು. ಚೀನಾ ಭಾರತದ ಸಹೋದರ ಎಂಬ ಭಾವನೆ ಅಂದಿನ ಪ್ರಧಾನಿಯವರಲ್ಲಿತ್ತು. ಅವರಿಗೆ ದೇಶದ ಮೇಲಿನ ಆಕ್ರಮಣಕ್ಕಿಂತ ಜಾಗತಿಕ ನಾಯಕರಾಗುವ ಹಂಬಲ ಹೆಚ್ಚಿತ್ತು. ಇದರ ಪರಿಣಾಮ ನಾವು ಸೋಲಬೇಕಾಗಿ ಬಂತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಬಲಿಷ್ಠ ಪ್ರಧಾನಿ ಈ ದೇಶವನ್ನು ಆಳುತ್ತಿದ್ದಾರೆ. ಇಂದು ಚೀನಾ ಕಾಲು ಕೆದಕಿದರೆ ಅದಕ್ಕೆ ತಕ್ಕ ಉತ್ತರ ನೀಡುವ ಸರ್ವ ರೀತಿಯ ತಾಕತ್ತು ನಮ್ಮ ಸೇನೆಯ ಬಳಿ ಮತ್ತು ಸರ್ಕಾರದ ಬಳಿಯಿದೆ ಎಂದರು.
ಶಾಸಕ ಸಂಜೀವ ಮಠಂದೂರು ಮಾತನಾಡಿ, ಭಾರತವು ಪ್ರಪಂಚದ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತಿದೆ. ಆರ್ಥಿಕತೆಯಲ್ಲಿ ಅಮೇರಿಕಾಕ್ಕಿಂತ ಮುಂದಿದೆ. ಸೈನಿಕರ ಸಂಖ್ಯೆ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಭಾರತ ಈಗ ಯಾವುದೇ ದೇಶದ ಆಕ್ರಮಣಕಾರಿ ಸವಾಲನ್ನು ಎದುರಿಸಲು ಸನ್ನದ್ಧವಾಗಿದೆ ಎಂದರು.
ಅಮರ್ ಜವಾನ್ ಜ್ಯೋತಿ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಅಲ್ಲದೆ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಅಂಬಿಕಾ ವಿದ್ಯಾಲಯದ ಪ್ರಾಂಶುಪಾಲೆ ರಾಜಶ್ರೀ ನಟ್ಟೋಜ, ಅಂಬಿಕಾ ವಿದ್ಯಾಲಯದ ಉಪ ಪ್ರಾಂಶುಪಾಲೆ ಮಾಲತಿ ಭಟ್ ಉಪಸ್ಥಿತರಿದ್ದರು.