ಮಂಗಳೂರು:ತುಂಬೆ ಡ್ಯಾಂನಲ್ಲಿ ಮುಂದಿನ 90 ದಿನಕ್ಕಾಗುವಷ್ಟು ನೀರು ಶೇಖರಣೆಯಾಗಿದ್ದರೂ, ನಾಗರಿಕರು ಮಿತವಾಗಿ ನೀರನ್ನು ಬಳಸುವ ಮುಖೇನ ದಿನವೂ ನೀರು ಪೂರೈಕೆ ಮಾಡಲು ಮಂಗಳೂರು ಮಹಾನಗರ ಪಾಲಿಕೆಯೊಂದಿಗೆ ಸಹಕರಿಸಬೇಕು ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.
ನಗರದ ತುಂಬೆಯಲ್ಲಿರುವ ಕಿಂಡಿ ಅಣೆಕಟ್ಟಿನ ಬಳಿ ನೇತ್ರಾವತಿ ನದಿಗೆ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಮೇಲ್ದರ್ಜೆಯಲ್ಲಿನ ಹೇಮರ್ ಡ್ಯಾಂನಲ್ಲಿ ನೀರಿನ ಶೇಖರಣೆ ಸಾಕಷ್ಟಿದ್ದು, ಮಿತವಾಗಿ ಬಳಕೆ ಮಾಡಿದ್ದಲ್ಲಿ ಈ ಹಿಂದಿನಂತೆ ಪಾಲಿಕೆಯಿಂದ ದಿನವೂ ನೀರು ಪೂರೈಕೆ ಸಾಧ್ಯ ಎಂದು ಹೇಳಿದರು.
ಅಮೃತ್ ಯೋಜನೆಯಡಿಯಲ್ಲಿ ತುಂಬೆ ಡ್ಯಾಂಗೆ ಸಂಬಂಧಿಸಿದಂತೆ ಸಾಕಷ್ಟು ಕಾಮಗಾರಿಗಳು ನಡೆಯುತ್ತಿದ್ದು, ಈ ಮೂಲಕ ಮುಂದಿನ ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವ ನೀರು ದೊರಕಲು ಸಾಧ್ಯ. 35 ಕೋಟಿ ರೂ. ಪ್ಯಾಕೇಜ್ ಈಗಾಗಲೇ ಟೆಂಡರ್ ಆಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. 20 ಎಂಎಲ್ಡಿ ಸಾಮರ್ಥ್ಯದ ಡಬ್ಲ್ಯುಟಿಪಿ ಕಾರ್ಯ ಪ್ರಗತಿಯಲ್ಲಿದೆ.