ಮಂಗಳೂರು:ನಗರದಲ್ಲಿ ಕಳೆದ ವರ್ಷ ನಡೆದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ದ್ವೇಷ ಸಾಧಿಸಲು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಗಳೂರಿನ ನ್ಯೂ ಚಿತ್ರಾ ಸಿನಿಮಾ ಮಂದಿರ ಬಳಿ ಡಿ.16 ರಂದು ಚೆಕ್ ಪೋಸ್ಟ್ ನಲ್ಲಿದ್ದ ಗಣೇಶ್ ಕಾಮತ್ ಎಂಬ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆದಿತ್ತು. 2019ರ ಡಿ. 19 ರಂದು ಮಂಗಳೂರಿನಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಇಬ್ಬರು ಪ್ರತಿಭಟನಕಾರರು ಸಾವಿಗೀಡಾಗಿದ್ದರು. ಸಾವನ್ನಪ್ಪಿದ್ದ ವ್ಯಕ್ತಿಯ ಪರಿಚಿತವಾಗಿದ್ದ ಮಾಯಾ ಗ್ಯಾಂಗ್ ಗೋಲಿಬಾರ್ ಘಟನೆಗೆ ಪ್ರತೀಕಾರವಾಗಿ ಈ ಕೃತ್ಯ ಎಸಗಿದ್ದು ಇದೀಗ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಓರ್ವ ಅಪ್ರಾಪ್ತ ಬಾಲಕ ಮತ್ತು ಮುಹಮ್ಮದ್ ನವಾಜ್ ಎಂಬುವರನ್ನು ಬಂಧಿಸಲಾಗಿತ್ತು. ಇದೀಗ ಮಂಗಳೂರು ನಗರ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಮಂಗಳೂರಿನ ಕುದ್ರೋಳಿಯ ಅನೀಶ್ ಅಶ್ರ (22), ಅಬ್ದುಲ್ ಖಾದರ್ ಫಹಾದ್ (23), ಶೇಖ್ ಮಹಮ್ಮದ್ ಹ್ಯಾರಿಸ್ ಯಾನೆ ಜಿಗ್ರಿ (31), ಮುಹಮ್ಮದ್ ಖಾಯೀಸ್ (24), ರಾಹೀಲ್ ಯಾನೆ ಚೋಟು ರಾಹಿಲ್ (18), ಮುಹಮ್ಮದ್ ನವಾಜ್ (30) ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಈವರೆಗೆ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ ಎಂದು ಕಮಿಷನರ್ ಶಶಿಕುಮಾರ್ ಹೇಳಿದರು.
ಓದಿ: ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ: ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳಿಗಾಗಿ ಶೋಧ
ಮಾಯಾ ಗ್ಯಾಂಗ್ ಕೃತ್ಯ:
ಪೊಲೀಸ್ ಸಿಬ್ಬಂದಿ ಗಣೇಶ್ ಕಾಮತ್ ಅವರಿಗೆ ಹಲ್ಲೆ ಮಾಡಿರುವ ಪ್ರಕರಣದಲ್ಲಿ ಬಂಧಿತರಾಗಿರುವವರು ಮಾಯಾ ಗ್ಯಾಂಗ್ ಎಂಬ ತಂಡ ಕಟ್ಟಿಕೊಂಡಿದ್ದರು. ಮಾಯ ಗ್ಯಾಂಗ್ , ಮಾಯಾ ಟ್ರೂಪ್, ಮಾಯಾ ಟೀಮ್ ಎಂದು ಕರೆಸಿಕೊಳ್ಳುತ್ತಿದ್ದ ಈ ತಂಡ ಆರಂಭದಲ್ಲಿ ಡಿ.19 ರಂದು ಪೊಲೀಸ್ ಮೇಲೆ ಹಲ್ಲೆಗೆ ಸ್ಕೆಚ್ ಹಾಕಿತ್ತು. ಆದರೆ ಡಿ.19 ಕ್ಕೆ ಪೊಲೀಸರು ಅಲರ್ಟ್ ಇರುತ್ತಾರೆ ಎಂದು ಡಿ.16 ಕ್ಕೆ ಈ ಕೃತ್ಯ ಮಾಡಿದೆ ಎಂದು ತಿಳಿಸಿದರು.
ಅಪ್ರಾಪ್ತನ ಮೂಲಕ ಕೃತ್ಯ ನಡೆಸಿದ ತಂಡ:
ಪೊಲೀಸ್ ಮೇಲೆ ಹಲ್ಲೆ ನಡೆಸಿದ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದರೆ ಸಮಸ್ಯೆಯಾಗಲಿದೆ ಎಂದು ಅರಿತ ಈ ತಂಡ ತಮ್ಮ ಗ್ಯಾಂಗ್ನಲ್ಲಿದ್ದ ಅಪ್ರಾಪ್ತ ಬಾಲಕನ ಮೂಲಕ ಹಲ್ಲೆ ನಡೆಸಿದ್ದಾರೆ. ಅದರಂತೆ 16 ವರ್ಷದ ಅಪ್ರಾಪ್ತ ಬಾಲಕ ಈ ಕೃತ್ಯವನ್ನು ಎಸಗಿದ್ದಾನೆ ಎಂದರು.