ಮಂಗಳೂರು:ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೊಳಪಟ್ಟ ಮಂಗಳೂರು ವಿವಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೂ ಇಂದು ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದು, ಅವರನ್ನು ವಾಪಸ್ ಕಳುಹಿಸಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಮಂಗಳೂರು ವಿವಿ ಕಾಲೇಜಿನಲ್ಲಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯ ನಿರ್ಣಯದಂತೆ ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗಿತ್ತು. ಇದನ್ನು ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಪಾಲಿಸಿದ್ದು,12 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿ ಪ್ರವೇಶಕ್ಕೆ ಪಟ್ಟು ಹಿಡಿದಿದ್ದರು. ಆ ಬಳಿಕ ಸಭೆ ಸೇರಿದ ಕಾಲೇಜಿನ ವಿಭಾಗ ಮುಖ್ಯಸ್ಥರ ಸಮಿತಿ ವಿದ್ಯಾರ್ಥಿನಿಯರು ಹಿಜಾಬ್ನ್ನು ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ತೆಗೆದಿರಿಸಿ ತರಗತಿ, ಕ್ಯಾಂಪಸ್ ನಲ್ಲಿ ಬರುವಂತೆ ನಿರ್ಧರಿಸಲಾಗಿತ್ತು.
ಈ ಬಗ್ಗೆ ವಿವಾದಗಳು ಎದ್ದು, ನಿನ್ನೆ (ಶುಕ್ರವಾರ) ಶಾಸಕ ವೇದವ್ಯಾಸ ಕಾಮತ್ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪಿ.ಎಸ್ ಯಡಪಡಿತ್ತಾಯ ಅವರ ನೇತೃತ್ವದಲ್ಲಿ ಸಿಡಿಸಿ ಸಭೆ ನಡೆಸಿ ಹಿಜಾಬ್ ಧರಿಸಿ ಕಾಲೇಜು ಪ್ರವೇಶವಿಲ್ಲ ಎಂದು ನಿರ್ಧರಿಸಿತ್ತು. ಅಲ್ಲದೇ ವಿದ್ಯಾರ್ಥಿನಿಯರು ಬೇರೆ ಕಾಲೇಜಿಗೆ ತೆರಳುವುದಿದ್ದರೆ ವ್ಯವಸ್ಥೆ ಮಾಡುವುದಾಗಿ ನಿರ್ಣಯಿಸಲಾಗಿತ್ತು.
ಆದರೆ ಪಟ್ಟುಬಿಡದ 12 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದರು. ತರಗತಿ ಪ್ರವೇಶಿಸಲು ಮುಂದಾದ ವಿದ್ಯಾರ್ಥಿನಿಯರನ್ನು ಕಾಲೇಜು ಪ್ರಾಂಶುಪಾಲರು ವಾಪಸ್ ಕಳುಹಿಸಿದ್ದಾರೆ. ವಿದ್ಯಾರ್ಥಿನಿಯರಿಗೆ ಲೈಬ್ರರಿಗೆ ತೆರಳಲು ಅವಕಾಶ ನೀಡಿಲ್ಲ. ಹಾಗಾಗಿ ಅವರು ಮನೆಗೆ ವಾಪಸ್ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಮಂಗಳೂರು ವಿವಿ ಕಾಲೇಜಿನ ಹಿಜಾಬ್ ವಿವಾದ : ವಿದ್ಯಾರ್ಥಿ ಸಂಘದ ಅಧ್ಯಕ್ಷನ ರಾಜೀನಾಮೆ