ಮಂಗಳೂರು:ಪೊಲೀಸ್ ಸಿಬ್ಬಂದಿಗಳ ಮಕ್ಕಳ ಶಿಕ್ಷಣಕ್ಕಾಗಿ ನಿವೃತ್ತ ಪೊಲೀಸ್ ಕಾನ್ಸ್ಟೇಬಲ್ ಪುತ್ರರೊಬ್ಬರು ಮಾಡಿದ ಪ್ರಯತ್ನವೊಂದು, ಇದೀಗ ಅವರ ಶಿಕ್ಷಣಕ್ಕಾಗಿ ದೊಡ್ಡ ನಿಧಿಯೊಂದನ್ನು ಆರಂಭಿಸಲು ಕಾರಣವಾಗಿದೆ. ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ನಿವೃತ್ತ ಪೊಲೀಸ್ ಸಿಬ್ಬಂದಿ ಪುತ್ರ ತನ್ನ ಗೆಳೆಯನ ಜೊತೆಗೆ ಸೇರಿ ಒಂದು ಕೋಟಿ ರೂ.ಗಳ ನಿಧಿಯನ್ನು ವಿದ್ಯಾಭ್ಯಾಸಕ್ಕಾಗಿ ಬರುವ ಪೊಲೀಸ್ ಸಿಬ್ಬಂದಿಗಳ ಮಕ್ಕಳಿಗಾಗಿ ಆರಂಭಿಸಿದ್ದಾರೆ.
ಮಂಗಳೂರಿನ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಎಂ.ವಿ. ನಾಯರ್ ಅವರು ಬ್ಯಾಂಕ್ವೊಂದರ ಚೇರ್ಮೆನ್ ಆಗಿ ನಿವೃತ್ತಿಯಾಗಿದ್ದಾರೆ. ಇವರು ನಿವೃತ್ತ ಪೊಲೀಸ್ ಕಾನ್ಸ್ಟೇಬಲ್ ಎಂ.ಕೆ.ಆರ್ ನಾಯರ್ ಎಂಬುವರ ಪುತ್ರ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದ ಎಂ.ಕೆ.ಆರ್ ನಾಯರ್ ಅವರು ಪುತ್ರನನ್ನು ಪದವಿ ವಿದ್ಯಾಭ್ಯಾಸಕ್ಕಾಗಿ ಅಲೋಶಿಯಸ್ ಕಾಲೇಜಿಗೆ ಸೇರಿಸಿದ್ದರು.
ಆರ್ಥಿಕವಾಗಿ ತುಂಬಾ ಕಷ್ಟವಿದ್ದರೂ ಇವರನ್ನು ವಿದ್ಯಾಭ್ಯಾಸಕ್ಕೆ ಕಳುಹಿಸಿದ್ದರು. ತನ್ನ ತಾಯಿ ಕೂಡಿಟ್ಟ ಹಣದ ಡಬ್ಬಿಯನ್ನು ಒಡೆದು ಅವರ ವಿದ್ಯಾಭ್ಯಾಸಕ್ಕಾಗಿ ನೀಡಿದ್ದನ್ನು ಎಂ.ವಿ. ನಾಯರ್ ನೆನಪಿಸಿಕೊಳ್ಳುತ್ತಾರೆ. ಇಂತಹ ಸಂಕಷ್ಟದ ಸ್ಥಿತಿ ಬೇರೆಯವರಿಗೆ ಬರಬಾರದೆಂದು ಪೊಲೀಸ್ ಸಿಬ್ಬಂದಿಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಈ ನಿಧಿಯನ್ನು ಸ್ಥಾಪಿಸಿದ್ದಾರೆ.