ಮಂಗಳೂರು :ಕರ್ನಾಟಕದ ಆಸ್ತಿ ಕನ್ನಡಿಗರ ಮನೆಮಗ ಅಪ್ಪುಗೆ ಪದ್ಮಶ್ರೀ ಪ್ರಶಸ್ತಿ ಸಿಗಬೇಕು ಎಂದು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್.ಎನ್ ಹೇಳಿದ್ದಾರೆ.
ನಗರ ಪೊಲೀಸ್ ಕಮಿಷನರ್ ಶಶಿಕುಮಾರ್.ಎನ್ ಹೇಳಿಕೆ ನಗರದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಇದು ನಾನು ಓರ್ವ ಪೊಲೀಸ್ ಅಧಿಕಾರಿ ಎಂಬುದಕ್ಕೆ ಹೊರತಾಗಿ ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಪುನೀತ್ ರಾಜ್‍ಕುಮಾರ್ ಅವರ ಓರ್ವ ಅಭಿಮಾನಿಯಾಗಿ ನಾನು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ. ಪುನೀತ್ ರಾಜ್‍ಕುಮಾರ್ ಅವರು ಇಷ್ಟು ವರ್ಷಗಳಲ್ಲಿ ಸಾರ್ವಜನಿಕ ಜೀವನದಲ್ಲಿ ನಡೆದುಕೊಂಡಿರುವ ರೀತಿ ಎಲ್ಲರಿಗೂ ಪ್ರೇರಣಾದಾಯಕ. ಅವರ ಪಾರ್ಥೀವ ಶರೀರದ ವೀಕ್ಷಣೆಗೆ ರಾಜ್ಯದಿಂದ ಮಾತ್ರವಲ್ಲದೆ ಹೊರ ರಾಜ್ಯಗಳಿಂದ, ವಿದೇಶಗಳಿಂದಲೂ ಅಭಿಮಾನಿಗಳು ಬಂದಿದ್ದಾರೆ ಎಂದು ಹೇಳಿದರು.
ಇಡೀ ರಾಜ್ಯಕ್ಕೆ ಹೋಲಿಸಿದಲ್ಲಿ ದ.ಕ.ಜಿಲ್ಲೆಯಲ್ಲಿ ಕನ್ನಡ ಸಿನಿಮಾಗಳ, ಸಿನಿಮಾ ಸ್ಟಾರ್ಗಳ ಅಭಿಮಾನಿಗಳು ಕಡಿಮೆ ಎಂದೇ ಹೇಳಬಹುದು. ಆದರೂ ಪುನೀತ್ ರಾಜ್‍ಕುಮಾರ್ ಅವರ ಬಗ್ಗೆ ಜನತೆಗೆ ಎಷ್ಟೊಂದು ಅಭಿಮಾನವಿದೆ ಎಂದರೆ ಎಲ್ಲಾ ಕಡೆಗಳಲ್ಲಿ ಅವರ ಕಟೌಟ್‌ಗಳನ್ನು ಹಾಕಿ ಶ್ರದ್ಧಾಂಜಲಿ ಸಮರ್ಪಣೆ ಮಾಡಿದ್ದಾರೆ.
ನಾನು ಕಾಲೇಜು ದಿನಗಳಲ್ಲಿ ಇದ್ದಾಗ ಅವರ 'ಅಪ್ಪು' ಸಿನಿಮಾ ಬಿಡುಗಡೆ ಆಗಿತ್ತು. ಅಲ್ಲಿಂದ ಇತ್ತೀಚಿನ 'ಯುವರತ್ನ' ಸಿನಿಮಾದವರೆಗೆ ಅವರ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ. ಕುಟುಂಬ ಸಹಿತ ಸಿನಿಮಾ ನೋಡಬೇಕೆಂದರೆ ನಮ್ಮೆಲ್ಲರ ಪ್ರಪ್ರಥಮ ಆಯ್ಕೆ ಪುನೀತ್ ರಾಜ್‍ಕುಮಾರ್ ಸಿನಿಮಾವಾಗಿತ್ತು. ಇನ್ನು ಮುಂದೆ ಕುಟುಂಬ ಸಮೇತ ಯಾರ ಸಿನಿಮಾ ನೋಡಲು ಹೋಗುವುದು ಎಂಬ ಪ್ರಶ್ನೆ ನಮ್ಮಲ್ಲಿಮೂಡುತ್ತದೆ ಎಂದು ಶಶಿಕುಮಾರ್ ಎನ್. ಹೇಳಿದರು.
ತಮ್ಮ ಕುಟುಂಬದ ಸದಸ್ಯನನ್ನೇ ಕಳೆದುಕೊಂಡ ಭಾವ ಕರ್ನಾಟಕದ ಎಲ್ಲಾ ಮನೆಗಳಲ್ಲೂ ಕಂಡು ಬರುತ್ತಿದೆ. ದೇಶದಲ್ಲಿ ಅತ್ಯುತ್ತಮ ನಾಗರಿಕನಾಗಿ ಸೇವೆಸಲ್ಲಿಸಿದವರಿಗೆ 'ಪದ್ಮ' ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಆದ್ದರಿಂದ ಸಾಕಷ್ಟು ಕಡೆಗಳಿಂದ ಪುನೀತ್ ರಾಜ್‍ಕುಮಾರ್ ಅವರಿಗೆ ಪದ್ಮಶ್ರೀ ಅವಾರ್ಡ್ ಕೊಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಅದನ್ನು ನಾನು ಒಪ್ಪುತ್ತೇನೆ. ಯಾಕೆಂದರೆ, 'ಪದ್ಮ' ಪ್ರಶಸ್ತಿಗೆ ಗೌರವ ತರುವ ವ್ಯಕ್ತಿ ಪುನೀತ್ ರಾಜ್‍ಕುಮಾರ್ ಅಂದರೆ ಯಾವುದೇ ತಪ್ಪಿಲ್ಲ. ಹಾಗಾಗಿ, ಪದ್ಮಶ್ರೀ ಪ್ರಶಸ್ತಿ ಅವರಿಗೆ ಕೊಟ್ಟಲ್ಲಿ ನಾವು ಬಹಳ ಸಂತೋಷ ಪಡುತ್ತೇವೆ ಎಂದು ಹೇಳಿದರು.
ನಿನ್ನೆ ಹಾಗೂ ಇಂದು ಅಭಿಮಾನಿಗಳು ಎಷ್ಟೊಂದು ಶಿಸ್ತು, ಸಂಯಮದಿಂದ ವರ್ತಿಸಿರುವುದನ್ನು ಕಂಡಾಗ ಅವರು ಎಂಥಹ ವ್ಯಕ್ತಿತ್ವವುಳ್ಳವರು ಎನ್ನುವುದು ಸ್ಪಷ್ಟವಾಗುತ್ತದೆ. ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ನಿಜವಾಗಿಯೂ ಬಡವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.