ಮಂಗಳೂರು :ಕಳೆದ ವರ್ಷ ಕೊರೊನಾ ಲಾಕ್ಡೌನ್ ಸಮಯದಲ್ಲಿ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಅನ್ನಾಹಾರವಿಲ್ಲದೆ ದಣಿದಿದ್ದ ಮಾನಸಿಕ ಅಸ್ವಸ್ಥನನ್ನು ಮುಲ್ಕಿಯ ಕಾರ್ನಾಡ್ನಲ್ಲಿರುವ ಮೈಮುನಾ ಫೌಂಡೇಷನ್ನ 'ಆಪತ್ಬಾಂಧವ' ಆಸೀಫ್ ಅವರು ಕರೆದೊಯ್ದು ಆರೈಕೆ ಮಾಡಿ ಇದೀಗ ಮತ್ತೆ ಅವರ ಕುಟುಂಬಕ್ಕೆ ಸೇರಿಸಿದ್ದಾರೆ.
ಬಿಹಾರದ ಸಿವಾನ್ ಜಿಲ್ಲೆಯ ಲಖನ್ ಕುಮಾರ್ ಅವರು ಕಳೆದ ವರ್ಷ ಜುಲೈ ಸಂದರ್ಭ ಉದ್ಯೋಗ ಅರಸಿ ಮಂಗಳೂರಿಗೆ ಬಂದಿದ್ದರು. ಆದರೆ, ಅದಾಗಲೇ ನಗರದಲ್ಲಿ ಕೊರೊನಾ ಲಾಕ್ಡೌನ್ ಘೋಷಣೆಯಾಗಿತ್ತು. ಇದರಿಂದ ಎಲ್ಲೂ ಹೋಗಲಾರದೆ ಸರಿಯಾಗಿ ಅನ್ನಾಹಾರವಿಲ್ಲದೆ 10 ದಿನಗಳ ಕಾಲ ಸಂಕಷ್ಟಕ್ಕೆ ಸಿಲುಕಿದ್ದರು.
ಈತನ ಬಗ್ಗೆ ಯಾರೋ ಮುಲ್ಕಿಯ ಕಾರ್ನಾಡ್ನಲ್ಲಿರುವ ಮೈಮುನಾ ಫೌಂಡೇಷನ್ನ 'ಆಪದ್ಬಾಂಧವ' ಆಸೀಫ್ ಅವರಿಗೆ ತಿಳಿಸಿದ್ದಾರೆ. ತಕ್ಷಣ ಅವರು ಸ್ಥಳಕ್ಕೆ ಬಂದಿದ್ದಾರೆ. ಆಗ ರೈಲು ನಿಲ್ದಾಣದ ಬಳಿ ಶೆಡ್ವೊಂದರಲ್ಲಿ ಮಲಗಿದ್ದ ಲಖನ್ ಕುಮಾರ್ ಪೊಲೀಸರ ಭಯ ಹಾಗೂ ಕೋವಿಡ್ ಭಯದಿಂದ ಶೆಡ್‌ನಿಂದ ಹೊರ ಬರಲು ನಿರಾಕರಿಸಿದ್ದಾರೆ.
ಆದರೂ ಮನವೊಲಿಸಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅವರನ್ನು ಆಸೀಫ್ ಅವರು ಆಸ್ಪತ್ರೆಗೆ ದಾಖಲಿಸಿ ಬಳಿಕ ತಮ್ಮ ಆಪದ್ಬಾಂಧವ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಬಳಿಕ ಒಂದು ವರ್ಷಗಳ ಕಾಲ ತಮ್ಮೊಂದಿಗೆಯೇ ಅವರನ್ನು ಇರಿಸಿಕೊಂಡಿದ್ದಾರೆ.
ಇದೀಗ ಪಟೇಲ್ ಸಮಾಜದ ಅಧ್ಯಕ್ಷ ಪಂಚ ರಾಮ್ ಮತ್ತು ಸದಸ್ಯರ ಸಹಾಯದಿಂದ, ಲಖನ್ ಕುಮಾರ್ ಅವರ ಕುಟುಂಬವನ್ನು ಪತ್ತೆ ಹಚ್ಚಲಾಗಿದೆ. ಜುಲೈ 15ರಂದು ಲಖನ್ ಅವರ ಸಹೋದರನೊಂದಿಗೆ ಬಿಹಾರದ ಸಿವಾನ್ ಜಿಲ್ಲೆಗೆ ಕಳುಹಿಸಿದ್ದಾರೆ.