ಉಪ್ಪಿನಂಗಡಿ: ವಿವಾಹಿತ ಮಾನಸಿಕ ಅಸ್ವಸ್ಥೆಯೋರ್ವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಆಕೆಯನ್ನು ಗರ್ಭಿಣಿಯನ್ನಾಗಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ವಿವಾಹಿತ ಮಾನಸಿಕ ಅಸ್ವಸ್ಥೆ ಮೇಲಿನ ಅತ್ಯಾಚಾರ ಪ್ರಕರಣ: ಆರೋಪಿ ಅರೆಸ್ಟ್
34 ನೆಕ್ಕಿಲಾಡಿ ಗ್ರಾಮದ ಸಮೀಪ ಬಾಡಿಗೆ ಮನೆಯೊಂದರಲ್ಲಿದ್ದ ವಿವಾಹಿತ ಮಾನಸಿಕ ಅಸ್ವಸ್ಥೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಆಕೆಯನ್ನು ಗರ್ಭಿಣಿಯನ್ನಾಗಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
34 ನೆಕ್ಕಿಲಾಡಿ ಗ್ರಾಮದ ದರ್ಬೆ ನಿವಾಸಿ ಸುರೇಶ್ ಪ್ರಭು (40) ಬಂಧಿತ ವ್ಯಕ್ತಿ. ಸಂತ್ರಸ್ತೆ ಮೂಲತಃ ಪುತ್ತೂರು ತಾಲೂಕಿನ ನರಿಮೊಗರು ನಿವಾಸಿಯಾಗಿದ್ದು, ನೆಕ್ಕಿಲಾಡಿಯ ಸಮೀಪ ಬಾಡಿಗೆ ಮನೆಯೊಂದರಲ್ಲಿ ತನ್ನ 70 ವರ್ಷದ ತಾಯಿಯೊಂದಿಗೆ ವಾಸಿಸುತ್ತಿದ್ದರು. ಸಂತ್ರಸ್ತೆಯ ಪತಿ ಗುಜರಾತ್ನಲ್ಲಿದ್ದು, ಗಂಡನನ್ನು ಭೇಟಿಯಾಗದೆ ಸುಮಾರು 10 ತಿಂಗಳಾಗಿತ್ತು ಎನ್ನಲಾಗಿದೆ. ಮೇ 12ರಂದು ಇವರಿದ್ದ ಬಾಡಿಗೆ ಮನೆಗೆ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿ ಬಂದಿದ್ದು, ಅವರಿಗೆ ಸಂಶಯ ಬಂದು ಮಹಿಳೆಗೆ ಸ್ಕ್ಯಾನಿಂಗ್ ನಡೆಸಲು ತಿಳಿಸಿದ್ದರು.
ಅದರಂತೆ ಈಕೆಯ ಸ್ಕ್ಯಾನಿಂಗ್ ನಡೆಸಿದಾಗ ಈಕೆ ಏಳು ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದ್ದು, ಬಳಿಕ ಆಕೆಯ ತಾಯಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.