ಪುತ್ತೂರು :ಭಾರತೀಯ ಚಿಂತನೆಯಲ್ಲಿ ವೇದ ಕಾಲದಿಂದಲೂ ಪುರುಷ ಮಹಿಳೆ ಎಂಬ ಬೇಧ ಭಾವ ಇರಲಿಲ್ಲ ಎಂದು ನಟಿ, ರಾಜಕಾರಣಿ ಮಾಳವಿಕಾ ಅವಿನಾಶ್ ತಿಳಿಸಿದ್ದಾರೆ. ಪುತ್ತೂರಿನ ತೆಂಕಿಲದಲ್ಲಿರುವ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಭಾಭವನದಲ್ಲಿ ಭಾನುವಾರ ನಡೆದ ಕೇಶವ ಸ್ಮೃತಿ ಸಂವರ್ಧನ ಸಮಿತಿಯು `ಮಹಿಳೆ: ಹಿಂದೆ, ಇಂದು ಮತ್ತು ನಾಳೆ' ಎಂಬ ವಿಚಾರಧಾರೆಯಡಿ ಯೋಜಿಸಿದ ಪುತ್ತೂರು ಜಿಲ್ಲಾ ಮಹಿಳಾ ಸಮ್ಮೇಳನ `ನಾರಿ ಶಕ್ತಿ ಸಂಗಮ'ದಲ್ಲಿ ಸಮಾರೋಪದಲ್ಲಿ ಪ್ರೇರಣಾ ನುಡಿಗಳನ್ನಾದರು.
ವಿದೇಶಿಯರ ಆಕ್ರಮಣ, ಶೋಷಣೆಯ ಭಯದಿಂದ ಮಹಿಳೆ ಹಿಂದಕ್ಕೆ ಸರಿಯಲಾರಂಭಿಸಿದ್ದಳು. ಇಂತಹ ಶೋಷಣೆಯಿಂದ ಪಾರಾಗಲು ಆತ್ಮಾಹುತಿಯಂತಹ ಭಯಾನಕ ಕೃತ್ಯಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತಿದ್ದಳು. ಅಂತೆಯೇ, ಅನೇಕ ವೀರ ಮಹಿಳೆಯರು ಕ್ಷಾತ್ರ ಪ್ರದರ್ಶನ ಮಾಡಿ ಸಾಹಸವನ್ನೂ ಮೆರೆದಿದ್ದಾರೆ. ಇಂತಹ ಸಂದರ್ಭದಲ್ಲಿ ಹಿಂದೂ ಧರ್ಮವನ್ನು ಅನ್ಯರು ಸುಧಾರಣೆ ಮಾಡಲು ಹೋಗಲಿಲ್ಲ. ಬದಲಾಗಿ ಧರ್ಮದೊಳಗಿನ ಮಂದಿ ಸಮಾಜದ ಸುಧಾರಣೆ ಮಾಡಿದ್ದಾರೆ. ಧರ್ಮದ ಸಂಸ್ಕೃತಿ, ಸಂಸ್ಕಾರವನ್ನು ನಾಶಪಡಿಸಿ ಸಮಾನತೆಯನ್ನು ಸಾಧಿಸುವ ಉದ್ದೇಶ ಹಿಂದೂ ಧರ್ಮಕ್ಕಿಲ್ಲ ಎಂದು ಮಾಳವಿಕಾ ಅವಿನಾಶ್ ಹೇಳಿದರು.
ಮನುಷ್ಯನ ವಿಕಾಸ ಆತ್ಮದಲ್ಲಿ ಆಗಬೇಕಾಗಿದೆ: ಮೂಲಭೂತ ನಂಬಿಕೆಗಳ ತಳಹದಿಯಲ್ಲಿ ಮನುಷ್ಯ ಬದುಕುತ್ತಾನೆ. ಲಿಂಗ ತಾರತಮ್ಯವಿಲ್ಲದ ಸಮಾನತೆಯ ಬದುಕು ಹಿಂದೂ ಧರ್ಮದ ತಿರುಳು. ಇದು ಅರ್ಧ ನಾರೀಶ್ವರನಲ್ಲೂ ದರ್ಶನವಾಗುತ್ತದೆ. ಮನುಷ್ಯನ ವಿಕಾಸ ಆತ್ಮದಲ್ಲಿ ಆಗಬೇಕಾಗಿದೆ. ಇದು ಹಿಂದೂ ಧರ್ಮದ ಮೂಲೋದ್ದೇಶವೂ ಹೌದು ಎಂದು ತಿಳಿಸಿದ ಅವರು, ಹಿಂದೂ ಧರ್ಮದಲ್ಲಿ ಮಹಿಳೆಯರು ಪುರುಷರಂತೆ ಇರುವ ಅಗತ್ಯವೂ ಇಲ್ಲ. ಪುರುಷರಂತೆ ಜೀವನ ಶೈಲಿಯ ಅನುಕರಣೆಯೂ ಸಲ್ಲದು. ನಮ್ಮ ಮಹಿಳೆಯರಿಗೆ ಸ್ಥಾನಮಾನ ಗಳಿಸುವುದನ್ನು ಹೊರಗಿನವರು ಬಂದು ಹೇಳಿ ಕೊಡಬೇಕಾದ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.