ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೊಡ್ಡ ನಿಧಿಯ ಸಂಗ್ರಹವಾಗಬೇಕಾಗಿದೆ. ಹಾಗಾಗಿ, ಎಲ್ಲರೂ ಕನಿಷ್ಠ ಹತ್ತು ರೂ., ಗರಿಷ್ಠ ಅಂದರೆ ತಮ್ಮ-ತಮ್ಮ ಶಕ್ತಿ ಸಾಮರ್ಥ್ಯಕ್ಕನುಗುಣವಾಗಿ ನೀಡಬಹುದು. ಮನೆಗೆ ನೂರು ರೂ. ನಂತೆ ದೇಣಿಗೆ ನೀಡಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕರೆ ನೀಡಿದರು.
ನಗರದ ಕದ್ರಿಯಲ್ಲಿರುವ ವಿಶ್ವ ಹಿಂದೂ ಪರಿಷತ್ನ ವಿಶ್ವಶ್ರೀ ಸಭಾಂಗಣದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಬಡವ-ಶ್ರೀಮಂತ ಎಲ್ಲರ ಹಣದಿಂದ ಈ ಮಂದಿರ ನಿರ್ಮಾಣವಾಗಬೇಕು ಎನ್ನುವ ಉದ್ದೇಶದಿಂದ ಮಂದಿರವನ್ನು ದೇಣಿಗೆ ಹಣದಿಂದ ನಿರ್ಮಾಣ ಮಾಡಲಾಗುತ್ತಿದೆ. ಹಾಗಾಗಿ, ನಮ್ಮ ಶಕ್ತಿಗನುಸಾರವಾಗಿ ದೇಣಿಗೆ ನೀಡಿ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸೋಣ ಎಂದು ಹೇಳಿದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುವ ಮೂಲಕ ಶತ ಶತಮಾನಗಳ ಕನಸು ನನಸಾಗುವ ಕಾಲ ಕೂಡಿ ಬಂದಿದೆ. ಈ ಕಾರ್ಯದಲ್ಲಿ ನಾವು-ನೀವು ಎಲ್ಲರೂ ತಮ್ಮ ತಮ್ಮ ಶಕ್ತಿ ಸಾಮರ್ಥ್ಯಕ್ಕನುಗುಣವಾಗಿ ಕೈಜೋಡಿಸೋಣ. ಶ್ರೀರಾಮ ಮಂದಿರ ನಮ್ಮ ಸ್ವಾಭಿಮಾನದ ಪ್ರತೀಕ, ನಮ್ಮ ಗೌರವದ ಸಂಕೇತ ಎಂದು ಹೇಳಿದರು.