ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ಶನಿವಾರ ಮುಂಜಾನೆ ಕೊಪ್ಪರಿಗೆ ಇಳಿಯುವುದರೊಂದಿಗೆ ಮತ್ತು ರಾತ್ರಿ ನಡೆದ ಬಂಡಿ ಉತ್ಸವದೊಂದಿಗೆ ಸಂಪನ್ನಗೊಂಡಿತು.
ಜಾತ್ರೋತ್ಸವದ ಕೊನೆಯ ಉತ್ಸವವಾಗಿ ರಾತ್ರಿ ನೀರಿನಲ್ಲಿ ದೇವರ ಬಂಡಿ ಉತ್ಸವ ನೆರವೇರಿತು. ಇಂದು ಬೆಳಗ್ಗೆ ಪುರುಷರಾಯ ದೈವವು ಕುಮಾರಧಾರದ ಮತ್ಸ್ಯ ತೀರ್ಥದಲ್ಲಿರುವ ದೇವರ ಮೀನುಗಳಿಗೆ ಆಹಾರ ಸಮರ್ಪಣೆ ಮಾಡಿತು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಮುಕ್ತಾಯ ಶನಿವಾರ ಮಧ್ಯಾಹ್ನ ಮಹಾಪೂಜೆ ಬಳಿಕ ಬಂಡಿ ಉತ್ಸವದ ಪ್ರಯುಕ್ತ ಶ್ರೀ ದೇವಳದ ಹೊರಾಂಗಣದ ಸುತ್ತಲೂ ನೀರನ್ನು ತುಂಬಿಸಲಾಗಿತ್ತು. ರಾತ್ರಿ ಮಹಾಪೂಜೆಯ ಬಳಿಕ ಪಾಲಕಿ ಉತ್ಸವ ನೀರಿನಲ್ಲಿ ನೆರವೇರಿ, ನಂತರ ನೀರಿನಲ್ಲಿ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ರಥೋತ್ಸವ ನಡೆಯಿತು.
ಈ ಸುದ್ದಿಯನ್ನೂ ಓದಿ:ಕುಕ್ಕೆ ಸುಬ್ರಹ್ಮಣ್ಯನಿಗೆ ಅವಭೃತೋತ್ಸವ... ಚಂಪಾಷಷ್ಠಿ ಪ್ರಯುಕ್ತ ಮತ್ಸ್ಯತೀರ್ಥದಲ್ಲಿ ನೌಕಾ ವಿಹಾರ
ಡಿ.12ರಂದು ಕೊಪ್ಪರಿಗೆ ಏರುವುದರೊಂದಿಗೆ ಆರಂಭಗೊಂಡ ಕುಕ್ಕೆಯ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ನಿನ್ನೆ ನೀರಿನಲ್ಲಿ ಬಂಡಿ ಉತ್ಸವದೊಂದಿಗೆ ಮುಕ್ತಾಯಗೊಂಡಿದೆ. ಬಳಿಕ ದೀಪಾರಾಧನೆಯುಕ್ತ ಪಾಲಕಿ ಉತ್ಸವ ನಡೆದು ಕ್ಷೇತ್ರದ ದೈವಗಳಿಗೆ ಗೋಪುರ ನಡಾವಳಿ ನಡೆಯಿತು. ಶ್ರೀ ದೇವಳದ ಆನೆ ಯಶಸ್ವಿನಿ ಹೊರಾಂಗಣದಲ್ಲಿ ತುಂಬಿಸಲಾಗಿದ್ದ ನೀರಿನಲ್ಲಿ ಹೆಚ್ಚಿನ ಸಂಭ್ರಮ ಪಟ್ಟಿತು. ನೀರಿನಲ್ಲಿ ಹೊರಳಾಡಿ ತನ್ನ ಕಾಲು ಹಾಗೂ ಸೊಂಡಿಲಿನಿಂದ ನೀರು ಎರಚಿ, ನೀರಾಟವಾಡಿ ಭಕ್ತಾದಿಗಳಿಗೂ ಸಂತಸ ನೀಡಿತು.
ಈ ಸುದ್ದಿಯನ್ನೂ ಓದಿ:ಕುಕ್ಕೆ ಸುಬ್ರಹ್ಕಣ್ಯ ಷಷ್ಠಿ ಹಿನ್ನೆಲೆ: ಡಿ. 17 ರಿಂದ ನಾಲ್ಕು ದಿನ ದೇವಾಲಯ ಪ್ರವೇಶ ನಿಷೇಧ
ಸುಬ್ರಹ್ಮಣ್ಯ ಜಾತ್ರೆಯ ಅವಧಿಯಲ್ಲಿ ಶ್ರೀ ದೇವಳದ ವಿಶೇಷ ಸೇವೆಗಳಲ್ಲಿ ಒಂದಾದ ಸರ್ಪಸಂಸ್ಕಾರ ನಡೆಯುತ್ತಿರಲಿಲ್ಲ. ಶನಿವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಜಾತ್ರೆ ಸಂಪನ್ನಗೊಂಡಿರುವುದರಿಂದ ಇಂದಿನಿಂದ ಮತ್ತೆ ಸರ್ಪಸಂಸ್ಕಾರ ಸೇವೆ ಪುನರಾರಂಭಗೊಳ್ಳಲಿದೆ.