ಮಂಗಳೂರು:ನಗರದ ಬಜ್ಪೆ ಅಂತಾರಾಷ್ಟ್ರೀಯ ವಿಮಾನಯಾನದಲ್ಲಿ ವಿಪರೀತ ದರ ಏರಿಕೆ, ಕೇರಳ ಮೂಲದ ಪ್ರಯಾಣಿಕರಿಗೆ ತಪಾಸಣೆ ಹೆಸರಿನಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಕೇರಳ ಪ್ರವಾಸಿ ಸಂಘಂ ಕಾಸರಗೋಡು ಜಿಲ್ಲಾ ಸಮಿತಿಯು ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂದೆ ಇಂದು ಬೆಳಗ್ಗೆ ಪ್ರತಿಭಟನೆ ನಡೆಸಿತು.
ಕೇರಳ ಪ್ರವಾಸಿ ಸಂಘಂನಿಂದ ಪ್ರತಿಭಟನೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ವಿಮಾನಯಾನ ಸಂಸ್ಥೆಗಳು ಹಬ್ಬಗಳ ಸಂದರ್ಭ ಬೇಕಾಬಿಟ್ಟಿಯಾಗಿ ದರ ಏರಿಕೆ ಮಾಡುತ್ತಿವೆ. ಸರ್ಕಾರಿ ಸಂಸ್ಥೆಯಾದ ಏರ್ ಇಂಡಿಯಾ ಕೂಡಾ ಇದೇ ರೀತಿ ವರ್ತಿಸುತ್ತಿದೆ. ಅಲ್ಲದೆ ವಿಮಾನ ಪ್ರಾಧಿಕಾರದಿಂದ ಕರ್ನಾಟಕದವರಲ್ಲ ಎಂಬ ಕಾರಣಕ್ಕೆ ಮಲಯಾಳಂ ಪ್ರಯಾಣಿಕರಿಗೆ ಅವಮಾನ ಹಾಗೂ ಕಿರುಕುಳ ಸಹ ನಡೆಯುತ್ತಿದೆ ಎಂದು ಆರೋಪಿಸಿದರು.
ಕಾಸರಗೋಡು ಹಾಗೂ ಕಣ್ಣೂರು ಪ್ರದೇಶಗಳ ಪ್ರಯಾಣಿಕರು ಬಜ್ಪೆ ವಿಮಾನ ನಿಲ್ದಾಣವನ್ನು ದೊಡ್ಡ ಮಟ್ಟದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಅವರಿಂದ ಬರುವ ಹಣವೇ ಈ ವಿಮಾನ ನಿಲ್ದಾಣಕ್ಕೆ ಪ್ರಮುಖ ಆದಾಯ. ಆದರೆ ಅವರಿಗೆ ಭಾಷೆ ಹಾಗೂ ಧರ್ಮದ ಕಾರಣಕ್ಕೆ ಕಿರುಕುಳ ನೀಡುತ್ತಿರುವ ಘಟನೆ ಪದೇ ಪದೇ ಪುನರಾವರ್ತನೆಗೊಳ್ಳುತ್ತಿದೆ ಎಂದು ಕಾಟಿಪಳ್ಳ ಕಿಡಿಕಾರಿದರು.
ಅಲ್ಲದೆ, ಇಲ್ಲಿನ ವಿಮಾನಯಾನ ಸಂಸ್ಥೆ ಪಕ್ಕಾ ದಂಧೆಯಾಗಿ ಮಾಡಿ ವ್ಯವಹಾರ ನಡೆಸುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಿ ಒಂದು ಕಡೆ ಪ್ರಯಾಣ ಮಾಡಲು 10 ಸಾವಿರ ರೂ. ಇದ್ದರೆ, ಬಕ್ರೀದ್, ಓಣಂ ಹಬ್ಬದ ದಿನಗಳಲ್ಲಿ, ಶಾಲೆಗಳ ರಜಾ ದಿನಗಳಲ್ಲಿ ನಾಲ್ಕೈದು ಪಟ್ಟು ಅಧಿಕ ಟಿಕೆಟ್ ದರ ಹೆಚ್ಚಳ ಮಾಡುತ್ತಾರೆ. ಇದರಿಂದ ಬಡಪಾಯಿಗಳು ತಮ್ಮ ದುಡಿಮೆಯ ಎರಡು ತಿಂಗಳ ಸಂಬಳವನ್ನು ಬರೀ ಟಿಕೆಟ್ ದರಕ್ಕೆ ಮೀಸಲಿರಿಸಬೇಕಾಗುತ್ತದೆ. ಇದನ್ನು ವಿರೋಧಿಸಿ ಕೇರಳ ಪ್ರವಾಸಿ ಸಂಘಂ ಕಾಸರಗೋಡು ಜಿಲ್ಲಾ ಸಮಿತಿ ಹೋರಾಟ ನಡೆಸುತ್ತಿದೆ. ಇದಕ್ಕೆ ಡಿವೈಎಫ್ಐ ಬೆಂಬಲ ನೀಡುತ್ತಿದೆ. ಈ ಬೇಡಿಕೆಗೆ ವಿಮಾನ ಸಂಸ್ಥೆ ಸಹಮತ ನೀಡದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುತ್ತದೆ ಎಂದು ಮುನೀರ್ ಕಾಟಿಪಳ್ಳ ಎಚ್ಚರಿಕೆ ನೀಡಿದ್ದಾರೆ.