ಕರ್ನಾಟಕ

karnataka

ETV Bharat / state

ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ನಾಯಕರು ಹೋಗದಿರುವುದು ಮೂರ್ಖತನ: ಕಲ್ಲಡ್ಕ ಪ್ರಭಾಕರ್ ಭಟ್ - Ram Mandir

ಅಲ್ಪಸಂಖ್ಯಾತರಿಗೆ ನೋವಾಗುತ್ತದೆ ಅನ್ನೋ ಕಾರಣಕ್ಕೆ ರಾಮನ ಪ್ರತಿಷ್ಠಾಪನೆಗೆ ಹೋಗದಿರುವುದು ಕಾಂಗ್ರೆಸ್​ ಪಕ್ಷದ ಮೂರ್ಖತನ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಕಿಡಿಕಾರಿದ್ದಾರೆ.

ಆರ್​ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್
ಆರ್​ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್

By ETV Bharat Karnataka Team

Published : Jan 12, 2024, 7:18 PM IST

Updated : Jan 12, 2024, 7:39 PM IST

ಪುತ್ತೂರು (ದಕ್ಷಿಣ ಕನ್ನಡ) : ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಹೋಗದೇ ಇರಲು ನಿರ್ಧರಿಸಿರುವುದು ಮೂರ್ಖತನದ ಕೆಲಸ ಎಂದು ಆರ್​ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀರಾಮ ನಮಗೆ ಮಾತ್ರ ಅಲ್ಲ, ಇಡೀ ಜಗತ್ತಿಗೆ ಬೇಕಾದವನು. ರಾಮನ ಪ್ರತಿಷ್ಠಾಪನೆ ಸಂದರ್ಭದಲ್ಲಿ ಹೋಗದವರು ರಾಮ ಪ್ರತಿಪಾದಿಸಿದ ಧರ್ಮ, ಸಂಸ್ಕೃತಿ, ಮೌಲ್ಯಗಳನ್ನು ತಿರಸ್ಕಾರ ಮಾಡಿದಂತೆ. ರಾಮಮಂದಿರ ಕಾರ್ಯಕ್ರಮ ರಾಜಕೀಯ ಕಾರ್ಯಕ್ರಮವಲ್ಲ, ಈ ದೇಶದ ಪ್ರಧಾನಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಗೌರವದ ಸಂಗತಿ. ಪ್ರಾಣ ಪ್ರತಿಷ್ಠೆಯ ವೈದಿಕ ವಿಧಿ - ವಿಧಾನಗಳನ್ನು ವೈದಿಕರೇ ಮಾಡುತ್ತಾರೆ. ಆ ಸಂದರ್ಭದಲ್ಲಿ ಈ ದೇಶದ ಪ್ರಧಾನ ಮಂತ್ರಿಗಳ ಉಪಸ್ಥಿತಿ ಇರುವುದು ಒಂದು ವೈಶಿಷ್ಟ್ಯ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು.

ರಾಮ ಮಂದಿರ ಉದ್ಘಾಟನೆ ಹೋಗುವುದಿಲ್ಲ ಎಂಬ ನಿರ್ಧಾರ ಸಮಾಜದಲ್ಲಿ ಕೆಟ್ಟ ಸಂದೇಶ ಸಾರಲಿದೆ. ಸುದೈವ ಅಂದರೆ ಯಾರು ಅಯೋಧ್ಯೆಗೆ ಹೋಗದಿರಲು ನಿರ್ಧರಿಸಿದ್ದಾರೋ, ಅವರದೇ ಪಕ್ಷದ ಕೆಲವರು ಹೋಗುವ ಮಾತನಾಡಿದ್ದಾರೆ. ಅಂಥವರು ನ್ಯಾಯಧರ್ಮದ ಮಾರ್ಗದಲ್ಲಿರುವವರು, ಅಂತವರ ಸಂಖ್ಯೆ ಹೆಚ್ಚಾಗಬೇಕಿದೆ. ಎಲ್ಲ ಪಕ್ಷಗಳಲ್ಲಿ ಆ ರೀತಿಯ ಯೋಚನೆ ಬರಬೇಕಿದೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.

ರಾಮ ಪ್ರತಿಷ್ಠೆ ಪಕ್ಷಾತೀತವಾದ ವಿಚಾರ. ಈ ದೇಶ ರಾಮನ ದೇಶ, ವೈದಿಕ ಸಂಸ್ಕೃತಿ ಹಾಗೆ, ಹೀಗೆ ಎನ್ನುವ ಸ್ವಾಮೀಜಿಗಳು ತಮ್ಮ ಪ್ರತಿಷ್ಠೆಯನ್ನು ಬಿಡಬೇಕು. ರಾಮ ಎಲ್ಲರಿಗೂ ಬೇಕಾದವ. ರಾಮ ಪ್ರತಿಷ್ಠೆ ಅದು ನಮ್ಮ ಆತ್ಮದ ಪ್ರತಿಷ್ಠೆ. ಕೆಲವು ಸ್ವಾಮೀಜಿಗಳು ರಾಮನನ್ನು ಕೆಳ ಜಾತಿಯವರು ಮುಟ್ಟುತ್ತಾರೆ ಎನ್ನುವ ಆರೋಪ ಮಾಡುತ್ತಾರೆ. ರಾಮನನ್ನು ಎಲ್ಲರೂ ಮುಟ್ಟಬೇಕು. ರಾಮನನ್ನು ಯಾಕೆ ಮುಟ್ಟಬಾರದು? ರಾಮನನ್ನು ಮುಟ್ಟುವುದರಲ್ಲೇ ನಮ್ಮ ಜೀವನ ಇರುವಂತಹುದು. 1989 ರಲ್ಲಿ ರಾಮಮಂದಿರದ ಶಂಕುಸ್ಥಾಪನೆ ನಡೆದಾಗ ಮೊದಲ ಇಟ್ಟಿಗೆ ಇಟ್ಟಿರೋದು ಉಪೇಕ್ಷಿತ ಸಮುದಾಯದ ಬಂಧು ಆಗಿದ್ದವರು. ಜಾತಿ ಬಗ್ಗೆ ಮಾತನಾಡಿ ಸ್ವಾಮೀಜಿಗಳು ತಮ್ಮ ಗೌರವಕ್ಕೆ ಚ್ಯುತಿ ತರಬೇಡಿ ಎಂದು ಕಲ್ಲಡ್ಕ ಪ್ರಭಾಕರ ಭಟ್ ಮನವಿ ಮಾಡಿದರು.

ಇದನ್ನೂ ಓದಿ :ಹಿಂದೂ ಎಂಬ ಭಾವನೆ ಡಿ ಕೆ ಶಿವಕುಮಾರ್​ಗೆ ಬಂದಿರುವುದು ಸಂತೋಷ: ಮಾಜಿ ಶಾಸಕ ಹೆಚ್​.ಎಸ್ ಶಿವಶಂಕರ್

Last Updated : Jan 12, 2024, 7:39 PM IST

ABOUT THE AUTHOR

...view details