3 ತಿಂಗಳಿಂದ ನಾಪತ್ತೆಯಾಗಿದ್ದ ಯುವಕ ಕೊನೆಗೂ ಪತ್ತೆ ಮಂಗಳೂರು (ದಕ್ಷಿಣ ಕನ್ನಡ): ದುಡಿಮೆಗೆ ಊರು ಬಿಟ್ಟು ಹೋದವರು ನಾಪತ್ತೆಯಾದರೆ ಅವರನ್ನು ಹುಡುಕಾಡುವುದು ಸ್ವಲ್ಪ ಕಷ್ಟ. ಅದರಲ್ಲೂ ಮಾನಸಿಕ ಅಸ್ವಸ್ಥನಾಗಿದ್ದರೆ ಆತನ ಶೋಧ ಇನ್ನೂ ಸವಾಲೇ. ಇದೇ ರೀತಿ ಜಾರ್ಖಂಡ್ ರಾಜ್ಯದ ಯುವಕನೊಬ್ಬ ಮಂಗಳೂರಿಗೆ ದುಡಿಯಲು ಬಂದು ನಾಪತ್ತೆಯಾಗಿ ಮಾನಸಿಕ ಅಸ್ವಸ್ಥನಾಗಿ ತಿರುಗಾಡುತ್ತಿದ್ದಾಗ ವೈಟ್ ಡೌಸ್ ಸಂಸ್ಥೆಯವರು ರಕ್ಷಿಸಿ ಗುಣಪಡಿಸಿ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.
ಯುವಕನ ಹೆಸರು ಕಮಲೇಶ್ ರಾಮ್ (30). ಜಾರ್ಖಂಡ್‌ನ ಪಲಮು ಎಂಬಲ್ಲಿನ ಸಿಂಗಾರ ಕಲಮ್ನ ನಿವಾಸಿ. ಮಂಗಳೂರಿನ ಪೂಂಜಾ ಇಂಟರ್ ನ್ಯಾಶನಲ್ ಹೋಟೆಲ್ನಲ್ಲಿ ಕೆಲಸಕ್ಕಿದ್ದ. ಕೆಲಸದ ಸಂದರ್ಭದಲ್ಲಿ ಅಂದರೆ 2023ರ ಮಾರ್ಚ್ನಲ್ಲಿ ನಾಪತ್ತೆಯಾಗಿದ್ದ. ಹೋಟೆಲ್ನವರು ಮತ್ತು ಮನೆಯವರಿಗೂ ಸಿಗದ ಕಮಲೇಶ್ ರಾಮ್ ನಾಪತ್ತೆ ಬಗ್ಗೆ ಹೋಟೆಲ್ ಆಡಳಿತ ಮಂಡಳಿ ನಗರದ ಬಂದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಮನೆಯವರು, ಹೋಟೆಲ್ನವರು ಹಲವೆಡೆ ಶೋಧ ನಡೆಸಿದ್ದರೂ ಯುವಕ ಪತ್ತೆಯಾಗಿರಲಿಲ್ಲ.
ಮಂಗಳೂರಿನ ನಿರ್ಗತಿಕರ ಸೇವೆ ಮಾಡುವ ಸೇವಾ ಸಂಸ್ಥೆ ವೈಟ್ ಡೌಸ್ ಸಿಬ್ಬಂದಿಗೆ 2023ರ ಮಾರ್ಚ್ 31ರಂದು ಮಾನಸಿಕ ಅಸ್ವಸ್ಥತೆಯ ಲಕ್ಷಣ ಇರುವ ವ್ಯಕ್ತಿಯೊಬ್ಬ ಕಾಂಪೌಂಡ್ಗಳನ್ನು ಜಂಪ್ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಸಂಸ್ಥೆಯ ಕೊರಿನಾ ರಸ್ಕಿನಾ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಪೊಲೀಸರು ಬಂದಿದ್ದರು. ಎರಡು ಕಾಲುಗಳು ನೋವಾಗಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ವೈಟ್ ಡೌಸ್ ಸಂಸ್ಥೆಯವರು ವಿನಂತಿಸಿದರೂ ನಿರ್ಲಕ್ಷಿಸಿದ್ದರಂತೆ. ಬಳಿಕ ಆತನನ್ನು ಸಂಸ್ಥೆಗೆ ಕರೆದುಕೊಂಡು ಬಂದು ಉಪಚರಿಸಲಾಗಿದೆ.
ಮೂರು ತಿಂಗಳ ಚಿಕಿತ್ಸೆಯಿಂದ ಗುಣಮುಖನಾದ ಯುವಕನ ಬಗ್ಗೆ ಮಾಹಿತಿ ಪಡೆದು ಆತನ ರಕ್ಷಣೆ ವೇಳೆ ಸಿಕ್ಕ ಮೊಬೈಲ್ನ ಸಿಮ್ ಸರಿಪಡಿಸಿ ಅದರಿಂದ ಪತ್ನಿಯನ್ನು ಸಂಪರ್ಕಿಸಲಾಯಿತು. ಗಂಡನಿಲ್ಲದೇ ಸಣ್ಣ ಮಗುವಿನೊಂದಿಗೆ ಬೇಸರದಲ್ಲಿ ದಿನ ಕಳೆಯುತ್ತಿದ್ದ ಪತ್ನಿಗೆ ಗಂಡ ಮಂಗಳೂರಿನಲ್ಲಿರುವ ಮಾಹಿತಿ ತಿಳಿದು ಮಗು, ಗಂಡನ ಅಣ್ಣ ಮತ್ತು ಪತ್ನಿ ಜೊತೆಗೆ ಮಂಗಳೂರಿಗೆ ಬಂದಿದ್ದಾರೆ.
ಭಾವುಕ ಕ್ಷಣ: ಮಂಗಳೂರಿನ ವೈಟ್ ಡೌಸ್ ಸಂಸ್ಥೆಗೆ ಬಂದ ಕಮಲೇಶ್ ರಾಮ್ ಕುಟುಂಬ ಕಮಲೇಶ್ನನ್ನು ನೋಡುತ್ತಿದ್ದಂತೆ ಭಾವುಕವಾಗಿದೆ. ಹಲವು ನಿರ್ಗತಿಕರೊಂದಿಗೆ ಕುಳಿತಿದ್ದ ಪತಿಯನ್ನು ಕಂಡ ಪತ್ನಿ ಅಲ್ಲಿಗೆ ಬಂದು ಆತನ ಕಾಲಿಗೆರಗಿ ಗಳಗಳನೆ ಅತ್ತಿದ್ದಾಳೆ. ಕಮಲೇಶ್ ರಾಮ್ನನ್ನು ನೋಡಿದ ಆತನ ಕುಟುಂಬ ಭಾವುಕವಾಗಿದೆ. ಕುಟುಂಬ ಒಂದುಗೂಡಿದ ಸಂದರ್ಭದಲ್ಲಿ ಕುಟುಂಬದ ಪ್ರೀತಿ ಕಂಡು ಅಲ್ಲಿದ್ದ ಎಲ್ಲರೂ ಅರೆ ಕ್ಷಣ ಕಣ್ಣೀರಾದರು.
ಈ ಬಗ್ಗೆ ಮಾತನಾಡಿದ ವೈಟ್ ಡೌಸ್ ಸಂಸ್ಥೆಯ ಸ್ಥಾಪಕಿ ಕೊರಿನಾ ರಸ್ಕಿನ್, "ಕಮಲೇಶ್ ರಾಮ್ನನ್ನು ನಮ್ಮಲ್ಲಿ ಕರೆದುಕೊಂಡು ಬಂದಾಗ ಆತನ ಕಾಲಿಗೆ ಗಾಯಗಳಾಗಿದ್ದು, ಕುಡಿತದಿಂದ ಮಾನಸಿಕ ಅಸ್ವಸ್ಥನಾಗಿದ್ದ. ನಮ್ಮಲ್ಲಿ ಚಿಕಿತ್ಸೆ ನೀಡಿ ಗುಣಪಡಿಸಿದ ಬಳಿಕ ಕುಟುಂಬದ ಮಾಹಿತಿ ಕಲೆ ಹಾಕಿ ಅವರ ಮನೆಯವರನ್ನು ಸಂಪರ್ಕಿಸಲಾಯಿತು. ಜಾರ್ಖಂಡ್‌ನಿಂದ ಬಂದ ಆತನ ಕುಟುಂಬದವರ ಜೊತೆಗೆ ಕಮಲೇಶ್ ರಾಮ್ನನ್ನು ಕಳುಹಿಸಲಾಗಿದೆ. ಇದು ವೈಟ್ ಡವ್ಸ್ ಸಂಸ್ಥೆಯಿಂದ ಕುಟುಂಬದೊಂದಿಗೆ ಮತ್ತೆ ಸೇರಿಸಿದ 415ನೇ ಪ್ರಕರಣ" ಎಂದು ತಿಳಿಸಿದರು.
ಇದನ್ನೂ ಓದಿ:ಕೇರಳದಿಂದ ನಾಪತ್ತೆಯಾಗಿ ಮಾನಸಿಕ ಅಸ್ವಸ್ಥನಾಗಿದ್ದ ಯುವಕ.. ಮಂಗಳೂರಿನಲ್ಲಿ ಗುಣಮುಖನಾಗಿ ಮತ್ತೆ ಮನೆ ಸೇರಿದ ಕಥೆ..