ಮಂಗಳೂರು: ಜಗತ್ತಿನಲ್ಲಿ ಆತಂಕ ಸೃಷ್ಟಿಸಿರುವ ಕೊರೊನಾ ಐಸ್ ಕ್ರೀಂ ಉದ್ಯಮಕ್ಕೂ ದೊಡ್ಡ ಪೆಟ್ಟು ನೀಡಿದೆ. ಐಸ್ ಕ್ರೀಂ ತಿಂದರೆ ಶೀತ ಆಗುತ್ತದೆ, ಜ್ವರ ಬರುತ್ತದೆ ಎಂಬ ಕಾರಣದಿಂದ ಐಸ್ ಕ್ರೀಂ ತಿನ್ನುವುದರಿಂದ ಬಹಳಷ್ಟು ಜನ ದೂರ ಸರಿದಿದ್ದಾರೆ. ಉದ್ಯಮಕ್ಕೆ ಬಿದ್ದ ಈ ದೊಡ್ಡ ಹೊಡೆತದಿಂದ ಚೇತರಿಸಿಕೊಳ್ಳಲು ಐಸ್ ಕ್ರೀಂ ಉದ್ಯಮ ಆರೋಗ್ಯವರ್ಧಕ ಹೊಸ ಫ್ಲೇವರ್ ಗಳತ್ತ ಮುಖ ಮಾಡಿದೆ.
ಮಂಗಳೂರಿನ ಹ್ಯಾಂಗ್ಯೋ ಐಸ್ ಕ್ರೀಂ ಸಂಸ್ಥೆ ರೋಗನಿರೋಧಕ ಶಕ್ತಿ ತುಂಬುವ ಚ್ಯವನಪ್ರಾಶ, ತುಳಸಿ, ನಿಂಬೆ, ಶುಂಠಿ, ಅರಿಶಿಣ ಮೊದಲಾದ ಫ್ಲೇವರ್‌ಗಳ ಐಸ್ ಕ್ರೀಂಅನ್ನು ಮಾರುಕಟ್ಟೆಗೆ ಬಿಡಲು ಸಜ್ಜಾಗಿದೆ. ಈ ಬಗ್ಗೆ ಕಳೆದ 40 ದಿನಗಳಿಂದ ಐಸ್ ಕ್ರೀಂಗಳ ಪ್ರಯೋಗಗಳನ್ನು ಮಾಡಲಾಗುತ್ತಿದೆ.
ಕೊರೊನಾದಿಂದ ಐಸ್ ಕ್ರೀಂ ಉದ್ಯಮ ಕಂಗಾಲು; ರೋಗನಿರೋಧಕ ಉತ್ಪನ್ನ ತಯಾರಿಸಲು ಸಿದ್ಧತೆ ಲಾಕ್‌ಡೌನ್ ಬಳಿಕ ಐಸ್ ಕ್ರೀಂ ಉದ್ಯಮಕ್ಕೆ ಬಿದ್ದ ದೊಡ್ಡ ಹೊಡೆತದ ಸಂದರ್ಭದಲ್ಲಿ ದೇಶದ ಎಲ್ಲ ಐಸ್ ಕ್ರೀಂ ಸಂಸ್ಥೆಗಳ ಮಾಲೀಕರು ಆನ್‌ಲೈನ್ ಸಭೆ ಸೇರಿ ಐಸ್ ಕ್ರೀಂ ಉದ್ಯಮ ಮತ್ತೆ ಚೇತರಿಸಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ತಜ್ಞರು ರೋಗನಿರೋಧಕವಾದ ಚ್ಯವನಪ್ರಾಶ ಸೇರಿದಂತೆ ಮೊದಲಾದ ಐಸ್ ಕ್ರೀಂಗಳನ್ನು ತಯಾರಿಸಲು ಸಲಹೆ ನೀಡಿದ್ದಾರೆ. ಇದರಂತೆ ಈ ಐಸ್ ಕ್ರೀಂ ತಯಾರಿಗೆ ಹ್ಯಾಂಗ್ಯೋ ಐಸ್ ಕ್ರೀಂ ಮುಂದಾಗಿದೆ.
ಮುಗ್ಗರಿಸಿರುವ ಈ ಉದ್ಯಮ ಚೇತರಿಸಿಕೊಳ್ಳಲು ಹೊಸ ಯೋಜನೆ ಜನರನ್ನು ಮತ್ತೆ ಐಸ್ ಕ್ರೀಂ ತಿನ್ನಿಸಲು ಉತ್ತೇಜಿಸುತ್ತದೆ ಎಂಬುದು ಐಸ್ ಕ್ರೀಂ ತಯಾರಕರ ನಿರೀಕ್ಷೆಯಾಗಿದೆ. ಇದಕ್ಕೆ ಜನರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.