ಸುಳ್ಯ (ಮಂಗಳೂರು):ಸುಳ್ಯದ ಬೆಳ್ಳಾರೆಯಲ್ಲಿಕೊಲೆಯಾದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಶವಯಾತ್ರೆ ವೇಳೆ ಕಲ್ಲು ತೂರಾಟ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.
ಪ್ರವೀಣ್ ನೆಟ್ಟಾರು ಅಂತಿಮ ದರ್ಶನಕ್ಕೆ ಬಂದಿದ್ದ ನಾಯಕರ ವಿರುದ್ಧ ಹಿಂದೂ ಕಾರ್ಯಕರ್ತರ ಆಕ್ರೋಶ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಿಂದ ಪುಷ್ಪಾಲಂಕೃತ ಆ್ಯಂಬುಲೆನ್ಸ್‌ನಲ್ಲಿ ಪ್ರವೀಣ್ ನೆಟ್ಟಾರು ಮೃತದೇಹ ಬೆಳ್ಳಾರೆಗೆ ಆಗಮಿಸುತ್ತಿದ್ದಂತೆ ಸಾವಿರಾರು ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಅಲ್ಲದೇ, ಪಾರ್ಥಿವ ಶರೀರದ ಅಂತಿಮ ದರ್ಶನದ ಪಡೆಯಲು ಬೆಳ್ಳಾರೆ ಜಂಕ್ಷನ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಸುನೀಲ್ ಕುಮಾರ್ ಮತ್ತು ಪುತ್ತೂರು ಶಾಸಕ ಸಂಜೀವ ಮಠಂದೂರು ಬಂದಿದ್ದರು.
ಆದರೆ, ಈ ವೇಳೆ ಸಂಸದರು, ಸಚಿವರು ಮತ್ತು ಶಾಸಕರ ವಿರುದ್ಧ ಹಿಂದೂ ಸಂಘಟನೆಯ ಕಾರ್ಯಕರ್ತರು ಧಿಕ್ಕಾರ ಕೂಗಿದರು. ಕಟೀಲ್ ಅವರ ಕಾರಿನ ಸುತ್ತ ಸಾವಿರಾರು ಕಾರ್ಯಕರ್ತರು ಜಮಾವಣೆಗೊಂಡು ಘೇರಾವ್ ಹಾಕಿ ಆಕ್ರೋಶ ಹೊರಹಾಕಿದರು. ಆಗ ಪರಿಸ್ಥಿತಿ ವಿಕೋಪಕ್ಕೆ ತಿರುಗುವಾಗ ಪೊಲೀಸರು ಲಾಠಿ ಬೀಸಿದರು.
ಆರ್ಎಸ್ಎಸ್ ಮುಖಂಡರಿಗೂ ಹಿಂದೂ ಕಾರ್ಯಕರ್ತರು ಘೇರಾವ್ ಹಾಕಿ, ಧಿಕ್ಕಾರ ಕೂಗಿದರು. ನ್ಯಾಯಕ್ಕಾಗಿ ಆಗ್ರಹಿಸಿದ ಕಾರ್ಯಕರ್ತರು, ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಕರಾವಳಿ ಭಾಗದ ಮುಖಂಡರು ಕಾರ್ಯಕರ್ತರ ಆಕ್ರೋಶದ ಬಿಸಿ ಮುಟ್ಟಿಸಿದರು. ಆಗ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.
ಇಷ್ಟೇ ಅಲ್ಲ, ಸಂಸದ ನಳಿನ್, ಸಚಿವ ಸುನೀಲ್ ಕುಮಾರ್ ಹಾಗೂ ಪ್ರಭಾಕರ ಭಟ್ ಕಾರಿನಲ್ಲೇ ಕೂತಾಗ ಆ ಕಾರುಗಳಿಗೆ ಘೇರಾವ್ ಹಾಕಿದ ಕಾರ್ಯಕರ್ತರು, ಕಾರಿಗಳ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ, ಹೆಲ್ಮೆಟ್ನಿಂದಲೂ ಕಾರುಗಳಿಗೆ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಇತ್ತ, ಬೆಳ್ಳಾರೆಯಲ್ಲಿ ಮೃತದೇಹದ ಅಂತಿಮದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಿಲಿಲ್ಲ. ಇದೀಗ ಅಂತ್ಯ ಸಂಸ್ಕಾರಕ್ಕಾಗಿ ಮೃತದೇಹವನ್ನು ನೆಟ್ಟಾರಿಗೆ ಕೊಂಡೊಯ್ಯಲಾಗಿದೆ. ಜೊತೆಗೆ ಪೊಲೀಸ್ ಲಾಠಿ ಚಾರ್ಜ್ನಿಂದಾಗಿ ಓರ್ವ ಯುವಕನ ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇದನ್ನೂ ಓದಿ:Praveen murder case: ಬಿಜೆಪಿ ಕಾರ್ಯಕರ್ತನ ಕೊಲೆ ಪ್ರಕರಣ ಎನ್ಐಎಗೆ ವಹಿಸಲು ಸಿಎಂ ನಕಾರ