ಮಂಗಳೂರು:ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಭಾರಿ ಮಳೆಯಾಗುತ್ತಿದ್ದು, ಬೆಳ್ತಂಗಡಿ ತಾಲೂಕಿನಲ್ಲಿ ಶಾಲಾ-ಕಾಲೇಜುಗಳಿಗೆ ಇಂದು ರಜೆ ನೀಡಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ. ಹವಾಮಾನ ಇಲಾಖೆಯು ಇಂದಿನಿಂದ ಜುಲೈ 7ವರೆಗೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಎಚ್ಚರಿಕೆ ನೀಡಿದೆ.
ಜೂನ್ 29 ಮತ್ತು 30ರಂದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಹಲವೆಡೆ ಜಲಾವೃತವಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ನಿನ್ನೆ ರಾತ್ರಿಯಿಂದ ಮತ್ತೆ ವರುಣನ ಆರ್ಭಟ ಜೋರಾಗಿದೆ. ಜಿಲ್ಲಾಡಳಿತವು ಬೆಳ್ತಂಗಡಿ ಹೊರತುಪಡಿಸಿ ಉಳಿದೆಡೆ ಬೆಳಿಗ್ಗೆ 5ರಿಂದ ಮಳೆ ಕಡಿಮೆ ಆಗುತ್ತಿರುವುದನ್ನು ಅಂದಾಜಿಸಿದೆ. ಆದರೆ ಬೆಳ್ತಂಗಡಿಯಲ್ಲಿ ವರ್ಷಧಾರೆ ಮುಂದುವರೆದಿದ್ದು, ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.