ಪುತ್ತೂರು: ಸರ್ಕಾರಿ ಆಧಿಕಾರಿಗಳು ಯಾವುದೇ ಹುದ್ದೆಯಲ್ಲಿರಲಿ, ಅವರು ಒತ್ತಡಕ್ಕೆ ಮಣಿದು ಕೆಲಸ ಮಾಡಬಾರದು. ಹೀಗೆ ಮಾಡುವುದರಿಂದ ಮುಂದೆ ತೊಂದರೆಗೆ ಒಳಗಾಗುವ ಅಪಾಯವಿದೆ. ಈ ನಿಟ್ಟನಿಲ್ಲಿ ನಿಯಮಾವಳಿಯಂತೆ ಸೌಜನ್ಯದಿಂದ ಕಚೇರಿ ಕೆಲಸವನ್ನು ಮಾಡುವಂತೆ ಮಂಗಳೂರು ಲೋಕಾಯುಕ್ತ ಉಪಾಧೀಕ್ಷಕ ವಿಜಯ ಪ್ರಸಾದ್ ಹೇಳಿದರು.
ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಾಗೃತಿ ಅರಿವು-2020 ಕಾರ್ಯಕ್ರಮ ನಡೆಸಲಾಯಿತು. ಗುರುವಾರ ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಜಾಗೃತ ಭಾರತ- ಸಮೃದ್ಧ ಭಾರತ ಘೋಷಣೆಯಡಿ ಲೋಕಾಯುಕ್ತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಅರಿವು-2020 ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಂಚ ಪಡೆಯುವುದು ಮಾತ್ರ ಭ್ರಷ್ಟಾಚಾರವಲ್ಲ. ಕಚೇರಿಗೆ ಸಮಯಕ್ಕೆ ಸರಿಯಾಗಿ ಹಾಜರಾಗದೆ ಇರುವುದು, ಸಾರ್ವಜನಿಕರ ಕೆಲಸವನ್ನು ವಿಳಂಬ ಮಾಡುವುದು ಕೂಡಾ ಭ್ರಷ್ಟಾಚಾರದಷ್ಟೇ ಕರ್ತವ್ಯ ಲೋಪದ ಅಪರಾಧವಾಗುತ್ತದೆ. ಯಾವುದೇ ಅಧಿಕಾರಿಯ ವಿರುದ್ಧ ಸಾರ್ವಜನಿಕರು ದೂರು ನೀಡಿದ ಮಾತ್ರಕ್ಕೆ ಅವರು ಅಪರಾಧಿಯಾಗುವುದಿಲ್ಲ. ತನಿಖೆಯಲ್ಲಿ ಸಾಬೀತಾದರೆ ಮಾತ್ರ ಅವರು ಅಪರಾಧಿಯಾಗುತ್ತಾರೆ. ತನ್ನದಲ್ಲದ ಕೆಲಸವನ್ನು ಮಾಡಿ ತನ್ನ ಕೆಲಸವನ್ನು ಮಾಡದೇ ಇರುವುದು ಕೂಡಾ ನಿಯಮಾವಳಿಗೆ ವಿರುದ್ಧವಾಗುತ್ತದೆ ಎಂದರು.
ವೇದಿಕೆಯಲ್ಲಿ ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್, ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ನಗರಸಭಾ ಪೌರಾಯುಕ್ತೆ ರೂಪಾ.ಟಿ ಶೆಟ್ಟಿ ಉಪಸ್ಥಿತರಿದ್ದರು.