ಮಂಗಳೂರು: ನಾವಿಲ್ಲಿ ನೋಡ್ತಿರೋದು ಬಾಲಕಿಯೊಬ್ಬಳು ಬೋರ್ಡ್ ಮೇಲೆ ಸರಸರನೇ ಬರೆಯುವ ದೃಶ್ಯ... ಇದರಲ್ಲೇನು ವಿಶೇಷ ಎಲ್ಲರೂ ಬರೆಯುತ್ತಾರೆ ಅಂದ್ಕೊಂಡಿದ್ರೆ ಅದು ಕೇವಲ ತಪ್ಪು ಕಲ್ಪನೆ ಆದೀತು.. ಹೌದು, ಬೋರ್ಡ್ ಮೇಲೆ ನಾವು ಸಾಮಾನ್ಯವಾಗಿ ಒಂದು ಕೈಯಲ್ಲಿ ಮಾತ್ರ ಒಂದೇ ಬಾರಿ ಮಾತ್ರ ಬರೆಯುತ್ತೇವೆ. ಹಾಗೆಯೇ ಎಲ್ಲರೂ ಒಂದೇ ಕೈಯಲ್ಲಿ ಬರೆಯೋದನ್ನು ನೋಡಿರುತ್ತೇವೆ. ಆದರೆ, ಮಂಗಳೂರಿನ ಬಾಲಕಿಯೊಬ್ಬಳು ಎರಡೂ ಕೈಗಳಿಂದ ಏಕಕಾಲದಲ್ಲಿ ಬೇರೆ ಬೇರೆ ವಿಚಾರಗಳನ್ನು ಬರೆಯುತ್ತಾರೆ. ಉಲ್ಟಾ ಬರವಣಿಗೆ, ಮಿರರ್ ಎಫೆಕ್ಟ್ ರೈಟಿಂಗ್ ಏನೇ ಇದ್ರೂ ಸಲೀಸಾಗಿ ಬರೆಯುತ್ತಾರೆ.
ಮಂಗಳೂರಿನ ಗೋಪಾಡ್ಕರ್ ಹಾಗೂ ಸುಮಾಡ್ಕರ್ ದಂಪತಿಯ ಪುತ್ರಿ ಆದಿ ಸ್ವರೂಪ, ಒಂದು ನಿಮಿಷಕ್ಕೆ 45 ಪದಗಳನ್ನು ಎರಡೂ ಕೈಗಳಿಂದ ಬರೆದು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಉತ್ತರ ಪ್ರದೇಶದ ಬರೇಲಿಯ ಲಾಟಾ ಫೌಂಡೇಶನ್ ಸಂಸ್ಥೆಯು, ಈ ವಿದ್ಯಾರ್ಥಿನಿ ಯುನಿಡೈರೆಕ್ಷನಲ್ ವಿಭಾಗದ ಶೈಲಿಯಲ್ಲಿ ಬರೆಯುವುದಕ್ಕೆ ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಪುರಸ್ಕಾರವನ್ನು ನೀಡಿದೆ.
ಶಾಲೆಗೆ ಹೋಗದೆಯೇ ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾರೆ ಆದಿ ಸ್ವರೂಪ. ಎರಡೂ ಕೈಯಲ್ಲಿ ಯುನಿಡೈರೆಕ್ಷನಲ್, ಒಪೊಸಿಟ್ ಡೈರೆಕ್ಷನ್, ರೈಟ್ ಹ್ಯಾಂಡ್ ಸ್ಪೀಡ್, ಲೆಫ್ಟ್ ಹ್ಯಾಂಡ್ ಸ್ಪೀಡ್, ರಿವರ್ಸ್ ರನ್ನಿಂಗ್, ಮಿರರ್ ಇಮೇಜ್, ಹೆಟೆರೋಟೋಪಿಕ್, ಹೆಟೆರೋ ಲಿಂಗ್ವಿಸ್ಟಿಕ್, ಎಕ್ಸ್ಚೇಂಜ್, ಡ್ಯಾನ್ಸಿಂಗ್ ಹಾಗೂ ಬ್ಲೈಂಡ್ ಫೋಲ್ಡಿಂಗ್ ಎನ್ನುವ ಹತ್ತು ವಿಧಾನಗಳನ್ನು ಪ್ರಯೋಗ ಮಾಡಿದ್ದಾರೆ. ಈ ಹತ್ತು ವಿಧಾನಗಳಲ್ಲೂ ಎರಡೂ ಕೈಗಳ ವೇಗದಲ್ಲಿಯೂ ಹಾಗೂ ಸುಂದರವಾಗಿಯೂ ಬರೆಯುತ್ತಾರೆ ಆದಿ ಸ್ವರೂಪ.