ಮಂಗಳೂರು: ಆನ್ಲೈನ್ ಶಾಪಿಂಗ್ ಕಂಪೆನಿಯೊಂದರ ಹೆಸರಿನಲ್ಲಿ ಬಂದ ನಕಲಿ ಲಕ್ಷ ರೂಪಾಯಿ ಮೊತ್ತದ ನಗದು ಬಹುಮಾನದ ಘೋಷಣೆಯ ಪತ್ರವೊಂದನ್ನು ನಂಬಿದ ಕಾಣಿಯೂರಿನ ವ್ಯಕ್ತಿಯೊಬ್ಬರು 15 ಸಾವಿರ ರೂಪಾಯಿ ಕಳೆದುಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಚಾರ್ವಕ ದೇವಿನಗರದ ಸುಂದರ್ ನಾಗಲೋಕ ಹಣ ಕಳೆದುಕೊಂಡವರು. ಕೂಲಿ ಕೆಲಸ ಮಾಡುವ ಇವರಿಗೆ ಆನ್ಲೈನ್ ಶಾಪಿಂಗ್ಗೆ ಹೆಸರುವಾಸಿಯಾದ ನಾಪ್ ಟಾಲ್ ಕಂಪೆನಿಯ ಹೆಸರಿನಲ್ಲಿ ನಕಲಿ ಪತ್ರವೊಂದು ಬಂದಿತ್ತು. ಅದರಲ್ಲಿನ ಕೂಪನ್ನಲ್ಲಿ 14,90,000 ರೂಪಾಯಿ ಗೆದ್ದಿರುವುದಾಗಿ ನಮೂದಾಗಿತ್ತು. ಅಲ್ಲದೆ ಸಿದ್ದಾರ್ಥ್ ಎಂಬ ಹೆಸರಿನಲ್ಲಿ ಕರೆ ಮಾಡಿದ ಅಪರಿಚಿತ ವ್ಯಕ್ತಿ 14 ಲಕ್ಷದ 90 ಸಾವಿರ ಇರುವ ಚೆಕ್ ಕಳುಹಿಸಿ ಈ ಹಣದ ಶೇ.1 ರಷ್ಟು ಹಣವನ್ನು ಬ್ಯಾಂಕ್ ಖಾತೆಯೊಂದಕ್ಕೆ ಜಮೆ ಮಾಡುವಂತೆ ತಿಳಿಸಿದ್ದ.