ಕಡಬ: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕೈಕಂಬ ಎಂಬಲ್ಲಿ ಟಾಯ್ಲೆಟ್ನಲ್ಲಿ ಬಂಧಿಯಾಗಿದ್ದ ಚಿರತೆ ಸೆರೆ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡು ಹೋಗಿದೆ.
ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ವಿಫಲ: ಸಾರ್ವಜನಿಕರ ಆಕ್ರೋಶ
ಏರ್ ಗನ್ ಇದ್ದರೂ ಸರಿಯಾದ ರೀತಿಯಲ್ಲಿ ಆಪರೇಟ್ ಮಾಡುವ ಅಧಿಕಾರಿಗಳು ಯಾರೂ ಇರಲಿಲ್ಲ. ಪ್ರಜ್ಞೆ ತಪ್ಪಿಸುವ ಔಷಧಿ ತುಂಬಿಸುವ ಬಗ್ಗೆ ಸ್ಥಳೀಯ ಪಶುಸಂಗೋಪನಾ ಅಧಿಕಾರಿಗಳಿಗೆ ಗೊಂದಲ ಉಂಟಾಗಿತ್ತು. ಸರಿಯಾದ ರೀತಿಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಬೇಕಾದ ವ್ಯವಸ್ಥೆ ಇಲ್ಲದೆ ಚಿರತೆ ರಕ್ಷಣಾ ಕಾರ್ಯಾಚರಣೆ ಮಾಡಲಾಗಿದೆ.
ಜಯಲಕ್ಷ್ಮಿ ಎಂಬುವರ ಮನೆಯ ನಾಯಿಯನ್ನು ಹಿಡಿಯಲು ಓಡಿಸಿಕೊಂಡು ಬಂದ ಚಿರತೆ ನಾಯಿಯ ಜೊತೆಗೆ ಟಾಯ್ಲೆಟ್ ಒಳಗೆ ನುಗ್ಗಿತ್ತು. ಚಿರತೆಯನ್ನು ಗಮನಿಸಿದ ಮನೆಯವರು ಬಾಗಿಲು ಹಾಕಿದ್ದು, ಚಿರತೆ ಮತ್ತು ನಾಯಿ ಟಾಯ್ಲೆಟ್ ಒಳಗೆ ಬಂಧಿಯಾಗಿದ್ದವು. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಬೆಳಗ್ಗೆಯಿಂದಲೇ ಸುಳ್ಯ, ಸುಬ್ರಹ್ಮಣ್ಯ ಪ್ರದೇಶದ ಅರಣ್ಯ ಇಲಾಖಾಧಿಕಾರಿಗಳು ಚಿರತೆ ಹಿಡಿಯುವ ಕಾರ್ಯಾಚರಣೆ ಮಾಡಿದ್ದರು. ಅರವಳಿಕೆ ಮದ್ದು ನೀಡಿ ಚಿರತೆಯನ್ನು ಹಿಡಿಯುವ ಪ್ರಯತ್ನ ಮಾಡಲಾಗಿತ್ತು. ಸರಿಯಾದ ತರಬೇತಿ ಇಲ್ಲದೆ ಚಿರತೆ ಹಿಡಿಯಲು ಅರಣ್ಯ ಅಧಿಕಾರಿಗಳು ಪರದಾಡಿದ ದೃಶ್ಯಗಳು ಕಂಡುಬಂದವು.
ತಮ್ಮ ಬಳಿ ಏರ್ ಗನ್ ಇದ್ದರೂ ಸರಿಯಾದ ರೀತಿಯಲ್ಲಿ ಆಪರೇಟ್ ಮಾಡುವ ಅಧಿಕಾರಿಗಳು ಯಾರೂ ಇರಲಿಲ್ಲ. ಪ್ರಜ್ಞೆ ತಪ್ಪಿಸುವ ಔಷಧಿ ತುಂಬಿಸುವ ಬಗ್ಗೆ ಸ್ಥಳೀಯ ಪಶುಸಂಗೋಪನಾ ಅಧಿಕಾರಿಗಳಿಗೆ ಗೊಂದಲ ಉಂಟಾಗಿತ್ತು. ಸರಿಯಾದ ರೀತಿಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಬೇಕಾದ ವ್ಯವಸ್ಥೆ ಇಲ್ಲದೆ ಚಿರತೆ ರಕ್ಷಣಾ ಕಾರ್ಯಾಚರಣೆ ಮಾಡಲಾಗಿದೆ. ಚಿರತೆ ಶೌಚಾಲಯದ ಛಾವಣಿ ಶೀಟ್ ಮೂಲಕ ಹಾರಿ ತೋಟದೊಳಗೆ ಕಣ್ಮರೆಯಾಯಿತು. ಅದೃಷ್ಟವಶಾತ್ ನೆರೆದಿದ್ದ ಯಾರಿಗೂ ತೊಂದರೆಯಾಗಿಲ್ಲ. ಅರಣ್ಯ ಇಲಾಖೆಯ ಕಾರ್ಯಾಚರಣೆ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಮಾನ ವ್ಯಕ್ತಪಡಿಸಿದರು. ಕಳೆದ ವರ್ಷವೂ ಸುಳ್ಯ ತಾಲೂಕಿನಲ್ಲಿ ಇದೇ ರೀತಿ ಕಾರ್ಯಾಚರಣೆ ನಡುವೆ ಅರಣ್ಯಾಧಿಕಾರಿಗಳಿಗೆ ಗಾಯಗೊಳಿಸಿ ಚಿರತೆ ಪರಾರಿಯಾಗಿತ್ತು. ಮಾತ್ರವಲ್ಲದೆ ಕಳೆದ ವರ್ಷ ಕಾಲಿಗೆ ಗಾಯಗೊಂಡ ಕಾಡಾನೆಯೊಂದಕ್ಕೆ ಅರವಳಿಕೆ ನೀಡಿ ಚಿಕಿತ್ಸೆ ನೀಡುವ ಸಮಯದಲ್ಲಿ ಈ ಕಾಡಾನೆ ಮೃತಪಟ್ಟಿತ್ತು.