ಪುತ್ತೂರು (ದಕ್ಷಿಣ ಕನ್ನಡ) :ಕೊರೊನಾದಿಂದ ಜಾಗತಿಕ ತಲ್ಲಣ ಉಂಟಾದ ಪರಿಣಾಮ ಖಾಸಗಿ ವಿದ್ಯಾಸಂಸ್ಥೆಗಳಿಗೆ ಇದು ಬಿಸಿ ತುಪ್ಪದಂತಾಗಿದೆ. ಈ ನಿಟ್ಟಿನಲ್ಲಿ ಶಾಲಾ ಆಡಳಿತ ಮಂಡಳಿ, ಆರ್ಥಿಕ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಪುತ್ತೂರು ಅಂಬಿಕಾ ವಿದ್ಯಾಲಯ ಶಿವಂ ಫುಡ್ ಪ್ರೊಡಕ್ಟ್ಸ್ ಹೆಸರಿನಲ್ಲಿ ಸಣ್ಣ ಪ್ರಮಾಣದಲ್ಲಿ ಆಹಾರ ಉದ್ಯಮ ಆರಂಭಿಸಿದೆ ಎಂದು ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪನ್ಯಾಸಕ ಸತೀಶ್ ಕೆ. ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರು ನಿರುದ್ಯೋಗಿಗಳಾಗದೆ, ಆರ್ಥಿಕ ಸಂಕಷ್ಟ ದೂರ ಮಾಡುವ ಉದ್ದೇಶದಿಂದ ಆರಂಭವಾಗುವ ಈ ಉದ್ಯಮಕ್ಕೆ ಆರಂಭಿಕ ಹಂತದಲ್ಲಿ ಪೋಷಕರೇ ಗ್ರಾಹಕರಾಗಲಿದ್ದಾರೆ. ಬೇಡಿಕೆಗಳನ್ನು ಅನುಸರಿಸಿ ವಿವಿಧ ತರಹದ ತಿಂಡಿಗಳ ಮೂಲಕ ಮತ್ತಷ್ಟು ವಿಸ್ತಾರಗೊಳಿಸುವ ಯೋಚನೆ ಇದೆ. ಈ ಆಹಾರ ಉತ್ಪನ್ನಗಳ ತಯಾರಿಕೆಗೆ ಬಪ್ಪಳಿಗೆಯಲ್ಲಿರುವ ಅಂಬಿಕಾ ಸಂಸ್ಥೆಯ ಕೊಠಡಿಗಳನ್ನೇ ಬಳಸಲಾಗಿದೆ ಎಂದು ತಿಳಿಸಿದರು.
ಆಹಾರ ತಯಾರಿಕಾ ಉದ್ಯಮ ಪ್ರಾರಂಭಿಸಿದ ಅಂಬಿಕಾ ವಿದ್ಯಾಸಂಸ್ಥೆ ಶಾಲೆ ಆರಂಭವಾಗುವವರೆಗೆ ನಿರಂತರವಾಗಿ ಆಹಾರ ಉದ್ಯಮ ಮುಂದುವರಿಯುತ್ತದೆ. ಬೇಡಿಕೆ ಇದ್ದಲ್ಲಿ ನಂತರವೂ ಮುಂದುವರಿಯಲಿದೆ. ಈಗಾಗಲೇ ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಉದ್ಯಮಕ್ಕೆ ಚಾಲನೆ ನೀಡಿದ್ದಾರೆ. ಯಾವುದೇ ರಾಸಾಯನಿಕ ಬಳಸದೇ ಕೇವಲ ಸಾವಯವ ವಸ್ತುಗಳನ್ನು ಬಳಲಾಗುತ್ತದೆ. ಮೊದಲ ದಿನವೇ ಹಲಸಿನ ಚಿಪ್ಸ್, ಹಲಸಿನ ಬೀಜದ ಲಾಡು ತಯಾರಿಸಲಾಗಿದೆ. ಮುಂದಿನ ದಿನಗಳಲ್ಲಿ ಬಾಳೆಕಾಯಿ ಚಿಪ್ಸ್, ಬಾಳೆಹಣ್ಣು ಹಲ್ವಾ, ಸಾಂಬಾರು ಪುಡಿ ಮುಂತಾದವುಗಳನ್ನು ತಯಾರಿಸಲಾಗುವುದು ಎಂದರು.
ತಯಾರಿ ಕಾರ್ಯದಲ್ಲಿ ವಿದ್ಯಾ ಸಂಸ್ಥೆಯ ಬಹುತೇಕ ಉಪನ್ಯಾಸಕರು, ಶಿಕ್ಷಕರು, ಬೋಧಕೇತರ ಸಿಬ್ಬಂದಿ ಸಮೂಹ ತೊಡಗಿಸಿಕೊಂಡಿದೆ. ಮಾಸ್ಕ್, ತಲೆಗವಸು, ಕೈಕವಚಗಳನ್ನು ಧರಿಸಿ ಶುಚಿಯ ಜತೆಗೆ ರುಚಿಕರ ಉತ್ಪನ್ನಗಳನ್ನು ತಯಾರಿಸಿ ಬಂದ ಆದಾಯವನ್ನು ತನ್ನೊಳಗೆ ಹಂಚಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿ ಅಗತ್ಯದ ನೆರವನ್ನು ಒದಗಿಸುತ್ತಿದ್ದು, ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಪ್ರಿನ್ಸಿಪಾಲ್ ರಾಜಶ್ರೀ ನಟ್ಟೋಜ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಿನ್ಸಿಪಾಲ್ ಶಂಕರನಾರಾಯಣ ಭಟ್, ಅಂಬಿಕಾ ಬಾಲವಿದ್ಯಾಲಯದ ಉಪಪ್ರಿನ್ಸಿಪಾಲ್ ಮಾಲತಿ ಡಿ. ಉಪಸ್ಥಿತರಿದ್ದರು.