ಸುಬ್ರಹ್ಮಣ್ಯ:ಪ್ರಸಿದ್ಧ ನಾಗ ಕ್ಷೇತ್ರವಾದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಉತ್ಸವದ ಸಂಭ್ರಮ ಮನೆ ಮಾಡಿದೆ. ಹಲವಾರು ಪವಾಡಗಳ ನಾಡಾಗಿರುವ ಸುಬ್ರಹ್ಮಣ್ಯದಲ್ಲಿ ಜಾತ್ರೆಯ ಸಂದರ್ಭದಲ್ಲಿ ವಿಶೇಷ ಅತಿಥಿಗಳ ಆಗಮನವಾಗಿದ್ದು, ಅದರ ಸಂಪೂರ್ಣ ವರದಿ ಇಲ್ಲಿದೆ.
ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಗೆ ಆಗಮಿಸುವ ವಿಶೇಷ ಅತಿಥಿಗಳು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಇಲ್ಲಿನ ಕುಮಾರಧಾರಾ ಸ್ನಾನಘಟ್ಟಕ್ಕೆ ಭೇಟಿ ನೀಡಿ, ಪುಣ್ಯಸ್ನಾನ ಮಾಡಿ ನಂತರದಲ್ಲಿ ದೇಗುಲಕ್ಕೆ ಹೋಗುವುದು ಆಚಾರ. ಈ ಜಾಗಕ್ಕೆ ಇದೀಗ ಸಾವಿರಾರು ಸಂಖ್ಯೆಯಲ್ಲಿ ಮೀನುಗಳು ಅತಿಥಿಗಳಾಗಿ ಬಂದಿರುವುದು ಕುಕ್ಕೆ ಸುಬ್ರಹ್ಮಣ್ಯದ ವಿಶಿಷ್ಟತೆಯಾಗಿದೆ.
ದೇವಸ್ಥಾನದಲ್ಲಿ ಜಾತ್ರೆಯ ಆರಂಭಿಕ ಸಂದರ್ಭದಲ್ಲಿ ಕೊಪ್ಪರಿಗೆ ಏರುವ ರೂಢಿಯಿದೆ. ಈ ಸಮಯದಲ್ಲಿ ಅಂದರೆ ದ್ವಾದಶಿಯಂದು ದೂರದ ಏನೆಕಲ್ಲು ಸಂಕಪಾಲ ಸುಬ್ರಹ್ಮಣ್ಯ ದೇವಸ್ಥಾನದ ಮೀನುಗಳು ಇಲ್ಲಿಗೆ ಬರುತ್ತವೆ ಎನ್ನುವುದು ನಂಬಿಕೆ.
ಓದಿ: ಚಂಪಾಷಷ್ಠಿ ದಿನ ಹೊರರಾಜ್ಯದ ಭಕ್ತರಿಗೆ ಕುಕ್ಕೆ ಸುಬ್ರಹ್ಮಣ್ಯ ಪ್ರವೇಶ ನಿಷೇಧ
ಪ್ರತೀ ವರ್ಷ ಜಾತ್ರಾ ಮಹೋತ್ಸವದ ಸಮಯದಲ್ಲಿ ಇಲ್ಲಿನ ಕುಮಾರಧಾರಾ ಸ್ನಾನಘಟ್ಟ ಸಮೀಪ ಆಗಮಿಸುವ ಸಾವಿರಾರು ಸಂಖ್ಯೆಯ ಮೀನುಗಳು, ಜಾತ್ರೆ ಮುಗಿಯುವವರೆಗೂ ಇಲ್ಲೇ ಇರುತ್ತವೆ ಎನ್ನುತ್ತಾರೆ ಸ್ಥಳೀಯರು. ಈ ಮೀನುಗಳು ದೇವಸ್ಥಾನದ ಜಾತ್ರೋತ್ಸವದ ಕೊನೆಯಲ್ಲಿ ನಡೆಯುವ ದೈವದ ಕೋಲದಂದು ದೈವವು ನದಿಗೆ ಬಂದು ನೈವೇದ್ಯ ಸಮರ್ಪಣೆ ಮಾಡಿದ ಬಳಿಕ ಅದನ್ನು ತಿಂದು ತಮ್ಮ ಸ್ವಸ್ಥಾನಕ್ಕೆ ಮರಳುತ್ತವೆ ಎಂಬುದು ಗ್ರಾಮಸ್ಥರ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಭಕ್ತರ ನಂಬಿಕೆಯಾಗಿದೆ.