ಬೆಳ್ತಂಗಡಿ (ದಕ್ಷಿಣ ಕನ್ನಡ): ತಾಲೂಕಿನ ಶಿಬಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಹಲವು ಕುಟುಂಬಗಳು ಸಮಸ್ಯೆಗೆ ಒಳಗಾಗಿದ್ದವು. ಆದರೆ ಇದೀಗ ಅವರ ಬದುಕಿನಲ್ಲೂ ಹೊಸ ಭರವಸೆ ಮೂಡಿದ್ದು, ಟವರ್ ಸ್ಟೇಷನ್ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.
ಇಲ್ಲಿನ ಪೆರ್ಲ, ಪೊಸೋಡಿ, ಮಾರ್ಯಾಡಿ, ಬಂಗೇರಡ್ಕ, ಪತ್ತಿಮಾರು, ನೀರಾಣ, ಭಂಡಿಹೊಳೆ, ಬೂಡುದಮಕ್ಕಿ ಪರಿಸರದ ಸುಮಾರು 500 ಕುಟುಂಬಗಳು ಕಳೆದ 12 ವರ್ಷಗಳಿಂದ ಮೊಬೈಲ್ ನೆಟ್ವರ್ಕ್ಗಾಗಿ ಇನ್ನಿಲ್ಲದ ಹರಸಾಹಸ ಪಡುತ್ತಿದ್ದವು. ಈ ಬಗ್ಗೆ ಅದೆಷ್ಟೋ ಬಾರಿ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡುತ್ತಾ ಬಂದರೂ, ಫಲಿತಾಂಶ ಮಾತ್ರ ಶೂನ್ಯವಾಗಿತ್ತು.
ನೆಟ್ವರ್ಕ್ ಸಮಸ್ಯೆಯಿಂದ ಟೆಂಟ್ ಹಾಕಿರುವ ವಿದ್ಯಾರ್ಥಿಗಳು ಅನ್ಲೈನ್ ಕ್ಲಾಸ್ಗಾಗಿ ಪರದಾಟದ ಸುದ್ದಿ ಪ್ರಕಟಿಸಿದ್ದ ಈಟಿವಿ ಭಾರತ
ಇನ್ನೂ ಆನ್ಲೈನ್ ಕ್ಲಾಸ್ ಸಂಬಂಧ ಇಲ್ಲಿನ ವಿದ್ಯಾರ್ಥಿಗಳು ಅನುಭವಿಸುತ್ತಿದ್ದ ಸಂಕಷ್ಟವನ್ನು ಈಟಿವಿ ಭಾರತ ‘ಆನ್ಲೈನ್ ಕ್ಲಾಸ್ ಪರದಾಟ: ನೆಟ್ವರ್ಕ್ಗಾಗಿ ಬೆಟ್ಟದಲ್ಲಿ ಟೆಂಟ್ ಹಾಕಿದ ವಿದ್ಯಾರ್ಥಿಗಳು..!’ ಎಂಬ ವರದಿ ಪ್ರಕಟಿಸಿ ಅಧಿಕಾರಿಗಳು ಗಮನ ಹರಿಸುವಂತೆ ಮಾಡಿತ್ತು.
ಇದನ್ನೂ ಓದಿ: ಆನ್ಲೈನ್ ಕ್ಲಾಸ್ ಪರದಾಟ: ನೆಟ್ವರ್ಕ್ಗಾಗಿ ಬೆಟ್ಟದಲ್ಲಿ ಟೆಂಟ್ ಹಾಕಿದ ವಿದ್ಯಾರ್ಥಿಗಳು..!
ಈ ವರದಿ ಬೆನ್ನಲ್ಲೆ ಶಾಸಕ ಹರೀಶ್ ಪೂಂಜಾ ಸ್ಥಳಿಯರ ಸಮಸ್ಯೆಗೆ ಸ್ಪಂದಿಸಿದ್ದು, ಶೀಘ್ರದಲ್ಲೇ ಮೊಬೈಲ್ ನೆಟ್ವರ್ಕ್ ಟವರ್ ನಿರ್ಮಿಸಿ ಆ ಭಾಗದ ಜನರ ನೆಟ್ವರ್ಕ್ ಸಮಸ್ಯೆ ದೂರ ಮಾಡಲಾಗುವುದು ಎಂಬ ಭರವಸೆ ನೀಡಿದ್ದರು. ಅದರಂತೆ ಭಂಡಿಹೊಳೆಯಲ್ಲಿ ಟವರ್ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ಥಳಿಯ ಪ್ರಾಧ್ಯಾಪಕಿ, ಭಂಡಿಹೊಳೆಯಲ್ಲಿ ಟವರ್ ನಿರ್ಮಾಣ ಮಾಡಲು ಸ್ಥಳ ನಿಗದಿ ಪಡಿಸಿ ಇದೀಗ ಟವರ್ ನಿರ್ಮಾಣಕ್ಕೆ ಶಾಸಕರು ಶಿಲಾನ್ಯಾಸ ನೆರವೇರಿಸಿದ್ದಾರೆ. ನಮ್ಮ ಸಮಸ್ಯೆಯ ಬಗ್ಗೆ ಈ ಸ್ಥಳಕ್ಕೆ ಬಂದು ಸಮಸ್ಯೆ ಬಗ್ಗೆ ವಿಶೇಷ ವರದಿ ಪ್ರಕಟಿಸಿದ ಈಟಿವಿ ಭಾರತ್ಗೆ ಹಾಗೂ ಟವರ್ ನಿರ್ಮಾಣದ ಬಗ್ಗೆ ಸ್ಪಂದಿಸಿದ ಶಾಸಕ ಹರೀಶ್ ಪೂಂಜ ಇವರಿಗೂ ಈ ಭಾಗದ ಜನರ ಪರವಾಗಿ ಧನ್ಯವಾದ ಅರ್ಪಿಸಿದರು.