ಕರ್ನಾಟಕ

karnataka

ETV Bharat / state

'ಬಿಜೆಪಿಯ ಭೀಷ್ಮ' ಉರಿಮಜಲು ರಾಮ ಭಟ್​ಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು - ಪುತ್ತೂರಿನ ಮಾಜಿ ಶಾಸಕ ಉರಿಮಜಲು ಕೆ. ರಾಮ ಭಟ್​​ಗೆ ಅನಾರೋಗ್ಯ

ಪುತ್ತೂರಿನ ಹಿರಿಯ ಮಾಜಿ ಶಾಸಕ 'ಬಿಜೆಪಿಯ ಭೀಷ್ಮ' ಉರಿಮಜಲು ರಾಮ ಭಟ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ex mla urimajalu ram bhat admitted to hospital
ಪುತ್ತೂರಿನ ಮಾಜಿ ಶಾಸಕ ಉರಿಮಜಲು ಕೆ. ರಾಮ ಭಟ್​​ಗೆ ಅನಾರೋಗ್ಯ

By

Published : Oct 18, 2021, 5:04 PM IST

ಪುತ್ತೂರು:`ಬಿಜೆಪಿಯ ಭೀಷ್ಮ’ ಎಂದೇ ಕರೆಸಿಕೊಳ್ಳುತ್ತಿರುವ ಪುತ್ತೂರಿನ ಮಾಜಿ ಶಾಸಕ ಉರಿಮಜಲು ಕೆ. ರಾಮ ಭಟ್‌ ಅವರ ಆರೋಗ್ಯದಲ್ಲಿ ಏರುಪೇರು ಆಗಿರುವ ನಿಟ್ಟಿನಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಉರಿಮಜಲು ರಾಮ ಭಟ್ ಆರೋಗ್ಯದಲ್ಲಿ ಏರುಪೇರು

92ರ ಹರೆಯದ ಉರಿಮಜಲು ರಾಮ ಭಟ್ಟರು ವಯೋ ಸಹಜ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರನ್ನು ಕೆಲವು ದಿನಗಳ ಹಿಂದೆಯಷ್ಟೇ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚೇತರಿಸಿಕೊಂಡಿದ್ದ ರಾಮ ಭಟ್‌ರನ್ನು ಕೊಂಬೆಟ್ಟಿನಲ್ಲಿರುವ ಅವರ ಮನೆಗೆ ಕರೆ ತರಲಾಗಿತ್ತು. ಮತ್ತೆ ಅವರ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಇದೀಗ ಪುತ್ತೂರಿನ ಸುಶ್ರುತ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

ಜನಸಂಘದ ಪ್ರಭಾವಿ ನಾಯಕರಾಗಿ, ವಕೀಲರಾಗಿ, ಪುತ್ತೂರು ಪುರಸಭೆಯ ಅಧ್ಯಕ್ಷರಾಗಿ, ಕ್ಯಾಂಪ್ಕೋದ ಅಧ್ಯಕ್ಷರಾಗಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ, ಪುತ್ತೂರಿನ ಶಾಸಕರಾಗಿ, ಭಾರತೀಯ ಜನತಾ ಪಾರ್ಟಿಯ ಮುಂಚೂಣಿಯ ಮುಖಂಡರಾಗಿ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ರಾಮ ಭಟ್‌ ಅವರು ತನ್ನ ಇಳಿ ವಯಸ್ಸಿನಲ್ಲಿಯೂ ಯುವಕರಂತೆ ಚಟುವಟಿಕೆಯಿಂದ ಕೂಡಿದ್ದರು.

ಬಿಜೆಪಿ ವರಿಷ್ಠರಾಗಿದ್ದ ಲಾಲ್‌ಕೃಷ್ಣ ಅಡ್ವಾಣಿ ಸಹಿತ ಹಲವರ ಒಡನಾಡಿಯಾಗಿದ್ದ ರಾಮ ಭಟ್ಟರು ತುರ್ತು ಪರಿಸ್ಥಿತಿ ವಿರೋಧಿಸಿ ಹೋರಾಟ ನಡೆಸಿ ಜೈಲು ಸೇರಿದ್ದರು. 90ರ ಹರೆಯದಲ್ಲಿಯೂ ಅಗಾಧ ನೆನಪಿನ ಶಕ್ತಿ ಹೊಂದಿದ್ದ ರಾಮ ಭಟ್‌, ತಮ್ಮ ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಜೀವನದ ಕುರಿತು ಮೆಲುಕು ಹಾಕುತ್ತಿದ್ದರು.

ಪುತ್ತೂರಿನ ಮಾಜಿ ಶಾಸಕ ಉರಿಮಜಲು ರಾಮ ಭಟ್​​ಗೆ ಅನಾರೋಗ್ಯ

2008ರ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿ ಶಾಸಕಿಯಾಗಿದ್ದ ಶಕುಂತಳಾ ಟಿ. ಶೆಟ್ಟಿ ಅವರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ನಿರಾಕರಿಸಿದಾಗ ಶಕುಂತಳಾ ಶೆಟ್ಟಿಯವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ರಾಮ ಭಟ್ ಪ್ರೇರಣೆಯಾಗಿದ್ದರು. ನಂತರ ಸ್ವಾಭಿಮಾನಿ ವೇದಿಕೆ ಹುಟ್ಟು ಹಾಕಿದ್ದ ಇವರು ಸ್ವಾಭಿಮಾನಿ ಸೌಹಾರ್ದ ಸಹಕಾರಿ ಸಂಘದ ಹುಟ್ಟಿಗೂ ಕಾರಣರಾಗಿದ್ದರು.

ಬಿಜೆಪಿ ಹಿರಿಯರ ವೇದಿಕೆಯಲ್ಲಿ ಸಕ್ರಿಯರಾಗಿದ್ದ ಭಟ್​​​​

ಬಿಜೆಪಿಯ ಪ್ರಭಾವಿ ನಾಯಕರಾಗಿದ್ದು ಬಂಡಾಯ ಎದ್ದಿದ್ದ ಎ.ಕೆ.ಸುಬ್ಬಯ್ಯ, ಬಿ.ಬಿ. ಶಿವಪ್ಪ, ಅಣ್ಣಾ ವಿನಯಚಂದ್ರ ಮುಂತಾದವರ ಜತೆಗೂಡಿ ಬಿಜೆಪಿಯ ಹಿರಿಯರ ವೇದಿಕೆಯಲ್ಲಿಯೂ ಸಕ್ರಿಯರಾಗಿದ್ದ ರಾಮ ಭಟ್‌ರು 2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಬಂಡಾಯ ಘೋಷಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆರ್‌ಎಸ್‌ಎಸ್ ಸಹಿತ ಸಂಘ ಪರಿವಾರ, ಬಿಜೆಪಿಯ ಉನ್ನತ ನಾಯಕರ ರಾಜಿ ಸಂಧಾನಕ್ಕೂ ಬಗ್ಗದ ರಾಮ ಭಟ್‌ರವರು ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದರು.

ನಮೋ ನಮಃ ಎಂದ್ದಿದ್ದ ಮಾಜಿ ಶಾಸಕ

ಬಳಿಕದ ಬದಲಾದ ರಾಜಕಾರಣದ ಸಮಯದಲ್ಲಿ ನರೇಂದ್ರ ಮೋದಿಯವರಿಗೆ ನಮೋ ನಮಃ ಎಂದಿದ್ದ ರಾಮಭಟ್‌ರವರು ನಂತರದ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮಾತನಾಡಿದ್ದರು. 2020ರ ಏಪ್ರಿಲ್ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಖುದ್ದಾಗಿ ರಾಮ ಭಟ್ಟಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದರು. ಮತ್ತೆ ಬಿಜೆಪಿ ನಾಯಕರ ಜತೆ ಆಪ್ತರಾಗಿದ್ದ ರಾಮ ಭಟ್‌ರವರ ಮನೆಗೆ ಕೆಲವೇ ದಿನಗಳ ಹಿಂದೆ ಪುತ್ತೂರಿನ ಮಾಜಿ ಶಾಸಕ, ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಸಹಿತ ಹಲವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.

ಇದೀಗ ಅನಾರೋಗ್ಯದಿಂದಾಗಿ ಆಸ್ಪತ್ರೆ ಸೇರಿರುವ ರಾಮ ಭಟ್‌ರವರನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ಮತ್ತು ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ABOUT THE AUTHOR

...view details