ಮಂಗಳೂರು: ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದು ಜೀವ ಉಳಿಸಿದ 'ಆಪತ್ಬಾಂಧವ'ನನ್ನು ಗಾಯಾಳುವಿನ ಗ್ರಾಮದ ಜನರು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿರುವ ಅಪೂರ್ವ ಘಟನೆಗೆ ಕಟೀಲು ಸಮೀಪದ ಎಕ್ಕಾರು ಸಮೀಪ ನಡೆದಿದೆ.
ರಸ್ತೆ ಅಪಘಾತದ ಗಾಯಾಳುವಿನ ನೆರವಿಗೆ ಧಾವಿಸಿದ 'ಆಪತ್ಬಾಂಧವ'ನಿಗೆ ಗ್ರಾಮಸ್ಥರಿಂದ ಸನ್ಮಾನ - ಕಟೀಲು ಸುದ್ದಿ
ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದ ಮೊಹಮ್ಮದ್ ಶಫೀಕ್ ಎಂಬವರಿಗೆ 'ಕಾಯ್ದಂಡ ಯುವಕ ಮಂಡಲ'ದ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
ಆಗಸ್ಟ್ 5 ರಂದು ಎಕ್ಕಾರು ಬಳಿಯ 'ಕಾಯ್ದಂಡ ಯುವಕ ಮಂಡಲ'ದ ಗೌರವಾಧ್ಯಕ್ಷ ಚಂದ್ರಶೇಖರ ರೈ ಎಂಬವರು ಅಪಘಾತಕ್ಕೊಳಗಾಗಿ ಗಂಭೀರಾವಸ್ಥೆಯಲ್ಲಿ ರಸ್ತೆ ಮೇಲೆ ಬಿದ್ದಿದ್ದರು. ಇದೇ ಸಂದರ್ಭ ಅದೇ ದಾರಿಯಾಗಿ ಬಜ್ಪೆ ಕಡೆಗೆ ತೆರಳುತ್ತಿದ್ದ ಕಿನ್ನಿಗೋಳಿಯ ಗುತ್ತಕಾಡು (ಶಾಂತಿನಗರ) ನಿವಾಸಿ ಮೊಹಮ್ಮದ್ ಶಫೀಕ್ ಎಂಬವರು ಇದನ್ನು ಗಮನಿಸಿದ್ದಾರೆ. ತಕ್ಷಣ ಗಾಯಾಳು ಚಂದ್ರಶೇಖರ ರೈಯವರನ್ನು ತಮ್ಮದೇ ಕಾರಿನಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೊಹಮ್ಮದ್ ಶಫೀಕ್ ಅವರ ಈ ಮಾನವೀಯ ಕಾಳಜಿಯನ್ನು ಗುರುತಿಸಿ ದಶಮಾನೋತ್ಸವದ ಸಂಭ್ರಮದಲ್ಲಿರುವ 'ಕಾಯ್ದಂಡ ಯುವಕ ಮಂಡಲ'ದ ವತಿಯಿಂದ ಎಕ್ಕಾರು ಗ್ರಾಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಇದು ಮಾತ್ರವಲ್ಲದೇ, ಶಫೀಕ್ ಅವರ ಆಹ್ವಾನದ ಮೇರೆಗೆ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಗುತ್ತಕಾಡು ಕೆಜೆಎಂ ಸಭಾಭವನದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಕಾಯ್ದಂಡ ಯುವಕ ಮಂಡಲದ ಹತ್ತಕ್ಕೂ ಅಧಿಕ ಮಂದಿ ಸದಸ್ಯರು ರಕ್ತದಾನ ಮಾಡುವ ಮೂಲಕ ಮಾದರಿಯಾದರು.