ಮಂಗಳೂರು:ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಸರ್ಕಾರಿ ಬಸ್ಗಳ ಓಡಾಟ ಪುನರಾರಂಭಿಸುವಂತೆ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಗ್ರಹಿಸಿದೆ. ರಾಜ್ಯಾದ್ಯಂತ ಜೂನ್ 1 ರಿಂದ ಸರ್ಕಾರಿ ಕೆಎಸ್ಆರ್ಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ. ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಓಡಾಡುತ್ತಿದ್ದ ಸರ್ಕಾರಿ ಕೆಎಸ್ಆರ್ಟಿಸಿ ಬಸ್ಗಳನ್ನು ಕೊರೊನಾ ಕಾಲದ ನಂತರ ತನ್ನ ಸಂಚಾರವನ್ನು ಸ್ಥಗಿತಗೊಳಿಸಿದ ಕಾರಣ ಸೇವೆಯಲ್ಲಿ ಬಹಳಷ್ಟು ವ್ಯತ್ಯಯ ಕಂಡು ಬಂದಿದೆ. ಇದರಿಂದ ಉಭಯ ಜಿಲ್ಲೆಗಳ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಸರ್ಕಾರದಿಂದ ಮಂಜೂರಾಗಿ ಪರವಾನಿಗೆ ಪಡೆದ ಎಲ್ಲಾ ಕೆಎಸ್ಆರ್ಟಿಸಿ ಬಸ್ ಸಂಚಾರ ಸೇವೆಯನ್ನು ಮುಂದುವರಿಸಲು ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ರಾಜ್ಯ ಸರ್ಕಾರ ಹಾಗೂ ಸಾರಿಗೆ ಸಚಿವರನ್ನು ಒತ್ತಾಯಿಸಿದೆ.
ನರ್ಮ್ ಯೋಜನೆಯಡಿಯಲ್ಲಿ ಉಡುಪಿಯಲ್ಲಿ ಸುಮಾರು 55, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 35 ಕೆಎಸ್ಆರ್ಟಿಸಿ ನಗರ ಸಾರಿಗೆ ಬಸ್ಗಳು ಸಂಚಾರ ಸೇವೆ ಒದಗಿಸಲು ಮಂಜೂರಾಗಿದ್ದವು. ಉಡುಪಿಯಲ್ಲಿ 55 ಬಸ್ಗಳು ಮಂಜೂರಾಗಿ ಸೇವೆ ಸಲ್ಲಿಸುವ ಹೊತ್ತಿಗೆ ಖಾಸಗಿ ಬಸ್ಗಳ ಮಾಲಕರ ವಿರೋಧದ ನಡುವೆ ಆಶಾದಾಯಕ ಸೇವೆಯನ್ನು ಸಲ್ಲಿಸಿದೆ. ಅದೇ ರೀತಿ ಮಂಗಳೂರಿನಲ್ಲಿ ಮಂಜೂರಾದ 35 ಬಸ್ಗಳಲ್ಲಿ 18 ಬಸ್ಗಳು ನಗರದ ಸ್ಟೇಟ್ ಬ್ಯಾಂಕ್ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿತ್ತು. ಬಾಕಿ ಉಳಿದ ಬಸ್ಗಳಿಗೆ ನಗರದ ಹೊರಭಾಗದಿಂದ ಸೇವೆ ಸಲ್ಲಿಸಲು ಆರ್ಟಿಎ ಪ್ರಾಧಿಕಾರ ಸಭೆ ಒಪ್ಪಿಗೆ ನೀಡಿದ್ದವು. ಆ ಸಂದರ್ಭ ಖಾಸಗಿ ಬಸ್ ಮಾಲಕರು ಹೈಕೋರ್ಟ್ ಮೆಟ್ಟಿಲೇರಿ ತಡೆ ಹೇರಿದರೂ ಮುಂದೆ ನರ್ಮ್ ಸಾರಿಗೆ ಸೇವೆಗೆ ಸಂಬಂಧಿಸಿದ ಹೈಕೋರ್ಟ್ ದೂರನ್ನು ಜಿಲ್ಲಾಧಿಕಾರಿ ಹಂತದಲ್ಲಿ ಇತ್ಯರ್ಥಪಡಿಸಲು ನಿರ್ದೇಶನ ನೀಡಿತ್ತು.