ಮಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಎ.18ರಂದು ಚುನಾವಣೆ ನಡೆಯಲಿದ್ದು, ಇದಕ್ಕೆ ಸರ್ವ ಸಿದ್ಧತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಿರುಚಿತ್ರಣ ಇಲ್ಲಿದೆ.
ಸೌತ್ ಕೆನರಾ ಲೋಕಸಭಾ ಕ್ಷೇತ್ರವೆಂದು ಕರೆಯಲ್ಪಡುತ್ತಿದ್ದ ದ.ಕ.ಲೋಕಸಭಾ ಕ್ಷೇತ್ರ 1952 ರಲ್ಲಿ ಮದ್ರಾಸ್ ಪ್ರಾಂತ್ಯ ಕ್ಕೆ ಒಳಪಟ್ಟಿತ್ತು. ಈ ಸಂದರ್ಭ ಕಾಸರಗೋಡು ಮಂಗಳೂರಿಗೆ ಸೇರಿಕೊಂಡಿತ್ತು. ಬಳಿಕ ಮೈಸೂರು ಪ್ರಾಂತ್ಯ ಕರ್ನಾಟಕ ರಾಜ್ಯವಾಗಿ ಬದಲಾದ ಬಳಿಕ 1956ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರವಾಗಿ ಬದಲಾಯಿತು. ಆ ಬಳಿಕ 2008 ರಲ್ಲಿ ಕ್ಷೇತ್ರ ವಿಂಗಡಣೆಯಾದ ಹಿನ್ನೆಲೆಯಲ್ಲಿ ದ.ಕ.ಲೋಕಸಭಾ ಕ್ಷೇತ್ರವಾಗಿ ಬದಲಾಗಿ 2009 ರ ಲೋಕಸಭಾ ಚುನಾವಣೆ ದ.ಕ. ಲೋಕಸಭಾ ಕ್ಷೇತ್ರದ ಹೆಸರಿನಲ್ಲಿ ನಡೆಯಿತು.
ಸದ್ಯ ದ.ಕ.ಜಿಲ್ಲೆ ಎಂಟು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಮಂಗಳೂರು, ಮಂಗಳೂರು ದಕ್ಷಿಣ ಕ್ಷೇತ್ರ, ಮಂಗಳೂರು ಉತ್ತರ ಕ್ಷೇತ್ರ, ಬೆಳ್ತಂಗಡಿ ಕ್ಷೇತ್ರ, ಸುಳ್ಯ ಕ್ಷೇತ್ರ, ಮೂಡುಬಿದಿರೆ ಕ್ಷೇತ್ರ, ಪುತ್ತೂರು ಕ್ಷೇತ್ರ, ಬಂಟ್ವಾಳ ಕ್ಷೇತ್ರ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಏಳು ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದು, ಮಂಗಳೂರು ಕ್ಷೇತ್ರ ಮಾತ್ರ ಕಾಂಗ್ರೆಸ್ ಪಕ್ಷದ ವಶದಲ್ಲಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಿರುಚಿತ್ರಣ ದ.ಕ.ಲೋಕಸಭಾ ಕ್ಷೇತ್ರ ಮತದಾರರು
ಒಟ್ಟು- 16,97,417
ಪುರುಷರು- 8,33,729.
ಮಹಿಳೆಯರು-8,63,698
ಕಳೆದ ವರ್ಷದ ಮತದಾರದ ಸಂಖ್ಯೆ
15,64,114
ಈ ವರ್ಷ
6,97,417
ಜಾತಿವಾರು ಮತದಾರರು
ಹಿಂದೂ - 10,87,000
ಬಿಲ್ಲವ- 4.30 ಲಕ್ಷ
ಬಂಟ- 3 ಲಕ್ಷ
ದಲಿತ- 1.30 ಲಕ್ಷ
ಬ್ರಾಹ್ಮಣ- 1.20 ಲಕ್ಷ
ಒಕ್ಕಲಿಗ- 75 ಸಾವಿರ
ಇತರೆ- 30 ಸಾವಿರ
ಮುಸ್ಲಿಂ- 4,50,000
ಕ್ರೈಸ್ತ- 1,60,000
ದ.ಕ.ಲೋಕಸಭಾ ಕ್ಷೇತ್ರದಲ್ಲಿ 1991 ರಿಂದ ಬಿಜೆಪಿಯು ತನ್ನ ಅಧಿಪತ್ಯ ಸ್ಥಾಪಿಸಿದ್ದು, ಕಳೆದ 28 ವರ್ಷಗಳಿಂದ ಇಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಿಲ್ಲ.
1952 ರಿಂದ 1989ರವರೆಗೆ ಅಂದರೆ ಸರಿಸುಮಾರು 37 ವರ್ಷಗಳ ಕಾಲ ಕಾಂಗ್ರೆಸ್ ನ ಕೈವಶವಾಗಿದ್ದ ದ.ಕ.ಜಿಲ್ಲೆಯಲ್ಲಿ 1991 ರ ನಂತರ ಬಿಜೆಪಿ ತನ್ನ ಸಾಮ್ರಾಜ್ಯ ಸ್ಥಾಪಿಸಿದ್ದು ಮಾತ್ರವಲ್ಲ, ಈವರೆಗೆ ಯಾರಿಗೂ ಕ್ಷೇತ್ರವನ್ನು ಬಿಟ್ಟುಕೊಟ್ಟಿಲ್ಲ. ಈವರೆಗೆ ನಡೆದ ಒಟ್ಟು 16 ಲೋಕಸಭಾ ಚುನಾವಣೆಯಲ್ಲಿ 9 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ. 7 ಬಾರಿ ಬಿಜೆಪಿ ಗೆಲುವು ಸಾಧಿಸಿತ್ತು.
ಮಂಗಳೂರು ಕ್ಷೇತ್ರದ ಇಲ್ಲಿನ ವರೆಗಿನ ಸಂಸದರು.
1952- ಸೌತ್ ಕೆನರಾ ಕ್ಷೇತ್ರ ( ಮದ್ರಾಸ್ ರಾಜ್ಯ) ಬಿ.ಶಿವರಾವ್- ಕಾಂಗ್ರೆಸ್.
1957- (ಮೈಸೂರು ರಾಜ್ಯ)ಕೆ.ಆರ್.ಆಚಾರ್ - ಕಾಂಗ್ರೆಸ್
1962- ಅದೂರು ಶಂಕರ್ ಆಳ್ವ- ಕಾಂಗ್ರೆಸ್
1967- ಚೆಪ್ಪುದುರ ಮುತ್ತಣ್ಣ ಪುಣಚ - ಕಾಂಗ್ರೆಸ್
1971 - ಕೆ.ಕೆ.ಶೆಟ್ಟಿ- ಕಾಂಗ್ರೆಸ್.
1977- (ಕರ್ನಾಟಕ ರಾಜ್ಯ)- ಜನಾರ್ದನ ಪೂಜಾರಿ - ಕಾಂಗ್ರೆಸ
1980 -1989 -ಜನಾರ್ದನ ಪೂಜಾರಿ - ಕಾಂಗ್ರೆಸ್
1991 -1999 - ವಿ.ಧನಂಜಯ ಕುಮಾರ್- ಬಿಜೆಪಿ
2004 - ಡಿ.ವಿ.ಸದಾನಂದ ಗೌಡ- ಬಿಜೆಪಿ
2009-2014 -ನಳಿನ್ ಕುಮಾರ್ ಕಟೀಲು - ಬಿಜೆಪಿ
ಬಿಜೆಪಿಯಿಂದ ಮತ್ತೆ ಹಾಲಿಸಂಸದ ನಳಿನ್ ಕುಮಾರ್ ಸ್ಪರ್ಧಾ ಕಣದಲ್ಲಿದ್ದರೆ, ಕಾಂಗ್ರೆಸ್ ಇನ್ನೂ ತನ್ನ ಅಭ್ಯರ್ಥಿಯ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಹಿರಿಯ ಕಾಂಗ್ರೆಸ್ ನಾಯಕರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಬಿ.ಕೆ.ಹರಿಪ್ರಸಾದ್, ಮೊಯ್ದಿನ್ ಬಾವಾ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಅಂತಿಮವಾಗಿ ಬಿ.ಕೆ.ಹರಿಪ್ರಸಾದ್ ಮತ್ತು ಮಿಥುನ್ ರೈ ಹೆಸರು ಕೇಳಿಬರುತ್ತಿವೆ. ಆದರೆ ಯಾರಿಗೆ ಟಿಕೆಟ್ ಲಭ್ಯವಾಗುತ್ತದೋ ಕಾದು ನೋಡಬೇಕು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು 6,42,739 ಮತಗಳು ಪಡೆದು ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ 4,99,030 ಮತಗಳನ್ನು ಪಡೆದು 1.50 ಲಕ್ಷ ಮತಗಳ ಅಂತರದಲ್ಲಿ ಸೋತಿದ್ದರು.ಈ ಬಾರಿ ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರಬಲ ಸ್ಪರ್ಧೆ ನಡೆಯಲಿದೆ.