ಮಂಗಳೂರು:ಈ ಬಾರಿಯ ಗಣರಾಜ್ಯೋತ್ಸವ ಸಂಧರ್ಭದಲ್ಲಿ ನಾರಿ ಶಕ್ತಿ ಮೇಳೈಸಲಿದ್ದು, ಕರ್ತವ್ಯಪಥದಲ್ಲಿ ನಡೆಯಲಿರುವ ಸೇನಾ ಪಡೆಗಳ ಆಕರ್ಷಕ ಪಥಸಂಚಲನದಲ್ಲಿ ಭಾರತೀಯ ನೌಕಾದಳವನ್ನು ಮಂಗಳೂರು ಮೂಲದ ಮಹಿಳಾ ನೇವಿ ಅಧಿಕಾರಿ ಮುನ್ನಡೆಸಲಿದ್ದಾರೆ.
ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ಮಂಗಳೂರಿನ ದಿಶಾ ಅಮೃತ್ ಅವರು ಗಣರಾಜ್ಯೋತ್ಸವ ಫೆರೇಡ್‌ನಲ್ಲಿ ನೌಕಾಪಡೆಯ ತುಕಡಿಯನ್ನು ಮುನ್ನಡೆಸಲಿದ್ದಾರೆ. ರಾಜ ಪಥ ಕರ್ತವ್ಯಪಥವಾಗಿ ಬದಲಾದ ಬಳಿಕ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪಥಸಂಚಲನ ನಡೆಯಲಿದ್ದು, ರಾಷ್ಟ್ರದ ನೌಕಾದಳವನ್ನು ಮಂಗಳೂರಿನ ಯುವತಿ ಮುನ್ನಡೆಸುತ್ತಿರುವುದು ವಿಶೇಷವಾಗಿದೆ.
ಗಣರಾಜ್ಯೋತ್ಸವದಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಸೇನಾ ತುಕಡಿಗಳ ಪರೇಡ್ ಅಥವಾ ಪಥಸಂಚಲನಲ್ಲಿ ಪಾಲ್ಗೊಳ್ಳುವುದೇ ಸೇನಾ ಸಿಬ್ಬಂದಿಗಳಿಗೆ ಹೆಮ್ಮೆಯಾಗಿದೆ. ಅದರಲ್ಲೂ ನಮ್ಮ ರಾಜ್ಯದ ಯುವತಿ ನೌಕಾಪಡೆಯ ತಂಡವನ್ನು ಮುನ್ನಡೆಸುವುದಕ್ಕೆ ಆಯ್ಕೆಯಾಗಿರುವುದು ಸಂತಸದ ವಿಷಯವಾಗಿದೆ.
8 ನೇ ತರಗತಿಯಿಂದಲೇ ಎನ್‌ಸಿಸಿಯಲ್ಲಿ ತೊಡಗಿಸಿಕೊಂಡಿದ್ದರು:ದಿಶಾ ಅಮೃತ್ ಅವರು ಮಂಗಳೂರಿನ ಬೋಳೂರು ಸಮೀಪದ ತಿಲಕ್ ನಗರದ ಅಮೃತ್ ಕುಮಾರ್ ಮತ್ತು ಲೀಲಾ ಅಮೃತ್ ಅವರ ಪುತ್ರಿ. ಅವರಿಗೆ ನೌಕಾ ಪಡೆಯ ಅಧಿಕಾರಿಯಾಗಬೇಕು ಎಂಬ ಆಸೆ ಬಾಲ್ಯದಲ್ಲಿಯೇ ಇತ್ತು. ಈ ನಿಟ್ಟಿನಲ್ಲಿ 8 ನೇ ತರಗತಿಯಿಂದಲೇ ಎನ್‌ಸಿಸಿಯಲ್ಲಿ ತೊಡಗಿಸಿಕೊಂಡಿದ್ದರು. ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಹೊಸದಿಲ್ಲಿಯ ಗಣರಾಜ್ಯೋತ್ಸವ ಪೆರೇಡ್‌ಗೆ ಆಯ್ಕೆಯಾಗಿದ್ದರು.
ಭಾರತೀಯ ನೌಕಾಪಡೆಯ ವಿಶೇಷ ಅಧಿಕಾರಿಯಾಗಿ ನೇಮಕ:ದಿಶಾ ಅವರು ಪ್ರಾಥಮಿಕ ಶಿಕ್ಷಣದಿಂದ ಪಿಯುಸಿವರೆಗೆ ನಗರದ ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಆಗ ಕೆನರಾ ಕಾಲೇಜಿನಲ್ಲಿ ಎನ್‌ಸಿಸಿ ಇಲ್ಲದ ಕಾರಣ ಅಲೋಶಿಯಸ್ ಎನ್‌ಸಿಸಿಯ ಘಟಕದಲ್ಲಿ ತರಬೇತಿ ಪಡೆಯುತ್ತಿದ್ದರು. ಆಗಲೂ ಅವರಿಗೆ ಸೇನಾಪಡೆಗಳಿಗೆ ಅಧಿಕಾರಿಯಾಗುವ ಹಂಬಲವಿತ್ತು. ಬಳಿಕ ಬೆಂಗಳೂರಿನ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಬಿಇ ಕಂಪ್ಯೂಟರ್ ಸೈನ್ಸ್ ಕಲಿತಿದ್ದಾರೆ. ಆ ವೇಳೆಗಾಗಲೇ ನೌಕಾಪಡೆಯ ವಿವಿಧ ಅರ್ಹತಾ ಪರೀಕ್ಷೆಗಳನ್ನು ಎದುರಿಸುತ್ತಿದ್ದರು. ಕೆಲವು ಬಾರಿ ಇದರಲ್ಲಿ ವಿಫಲರಾದರೂ ಪ್ರಯತ್ನ ಕೈಬಿಡದೆ ಭಾರತೀಯ ನೌಕಾಪಡೆಯ ವಿಶೇಷ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಸದ್ಯ ನೌಕಾಪಡೆಯಲ್ಲಿ ಅಂಡಮಾನ್ ನಿಕೋಬಾರ್‌ನಲ್ಲಿ ಲೆಪ್ಟಿನೆಂಟ್ ಕಮಾಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಮುನ್ನಡೆಸುವ ನಿಟ್ಟಿನಲ್ಲಿ ನವೆಂಬರ್ 9 ಮತ್ತು 10 ರಂದು ಆಯ್ಕೆ ಪ್ರಕ್ರಿಯೆ ನಡೆದಿತ್ತು. ಆಯ್ಕೆಯಾದ ಬಳಿಕ ನ.18ರಿಂದ ತರಬೇತಿ ನೀಡಲಾಗುತ್ತಿದೆ.
ಮಗಳ ಸಾಧನೆಗೆ ದಿಶಾ ಅಮೃತ್ ಹೆತ್ತವರು ಖುಷಿ ವ್ಯಕ್ತಪಡಿಸಿದ್ದಾರೆ. ಮಗಳ ಸಾಧನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ದಿಶಾ ತಂದೆ ಅಮೃತ್ ಅವರು ನಮ್ಮ ಆಸೆ ಪುತ್ರಿ ಈಡೇರಿಸಿದಳು ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಮಗಳು ದಿಶಾ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ನೇವಿ ತುಕಡಿ ಮುನ್ನಡೆಸಲು ಆಯ್ಕೆಯಾಗಿದ್ದು ಸಂತಸ ತಂದಿದೆ. ನೌಕಾಪಡೆಯ ಬಗ್ಗೆ ನನಗೆ ಮತ್ತು ಪತ್ನಿಗೆ ವಿಶೇಷ ಆಸಕ್ತಿ ಇದೆ. ಆದರೆ, ಆ ಕಾಲದಲ್ಲಿ ನಮಗೆ ಕಲಿಯಲು ಸಾಧ್ಯವಾಗಿಲ್ಲ. ಇದೀಗ ನಮ್ಮ ಆಸೆಯನ್ನು ಮಗಳು ಈಡೇರಿಸಿದ್ದಾಳೆ ಎಂದು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ವಿಜಯ್ ಇಷ್ಟ ಅನ್ನೋ ಕಾರಣದಿಂದ ನಾನು ಆ ಸಿನಿಮಾ ಒಪ್ಪಿಕೊಂಡೆ : ನಟಿ ರಶ್ಮಿಕಾ ಮಂದಣ್ಣ