ಮಂಗಳೂರು: ಮಂಗಳೂರಿನಲ್ಲಿ ನಡೆದ ಎರಡು ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಮೂವರು ಬಜರಂಗದಳ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್ ನೀಡಲಾಗಿದೆ. ಬಾಲು ಅತ್ತಾವರ, ಗಣೇಶ್ ಅತ್ತಾವರ, ಜಯಪ್ರಶಾಂತ್ ಶಕ್ತಿನಗರ ಎಂಬ ಮೂವರು ಬಜರಂಗದಳ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್ ನೀಡಲಾಗಿದೆ.
ಯಾಕೆ ಗಡಿಪಾರು ಮಾಡಬಾರದು ಎಂದು ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು, ಇಂದು ಕಾನೂನು ಸುವ್ಯವಸ್ಥೆ ಡಿಸಿಪಿ ಎದುರು ಹಾಜರಾಗಲು ಸೂಚನೆ ನೀಡಲಾಗಿದೆ. ಬಳಿಕ ಮೂವರನ್ನು ಅಧಿಕೃತವಾಗಿ ಒಂದು ವರ್ಷಗಳ ಕಾಲ ಗಡಿಪಾರು ಆದೇಶ ಸಾಧ್ಯತೆ ಇದೆ. ಇತ್ತೀಚೆಗೆ ನಡೆದ ಎರಡು ನೈತಿಕ ಪೊಲೀಸ್ ಗಿರಿ ಕೇಸ್ನಲ್ಲಿ ಮೂವರು ಭಾಗಿಯಾಗಿದ್ದರು. ಸುಲ್ತಾನ್ ಜ್ಯುವೆಲ್ಲರಿ ಹಾಗೂ ಮರೋಳಿ ಹೋಳಿ ಆಚರಣೆ ವೇಳೆ ನೈತಿಕ ಪೊಲೀಸ್ ಗಿರಿ ನಡೆಸಿದ್ದರು. ಹೀಗಾಗಿ ಸ್ಥಳೀಯ ಠಾಣೆಗಳ ಇನ್ಸ್ಪೆಕ್ಟರ್ಗಳಿಂದ ಗಡಿಪಾರಿಗೆ ವರದಿ ನೀಡಲಾಗಿದೆ.
ಹೀಗಾಗಿ, ಅಧಿಕೃತವಾಗಿ ಕಾನೂನು ಪ್ರಕಾರ ಗಡಿಪಾರು ಅಸ್ತ್ರ ಪ್ರಯೋಗ ಮಾಡಲಾಗಿದ್ದು, ಇದೀಗ ನೋಟಿಸ್ ನೀಡಿ ಗಡಿಪಾರು ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್ ಅವರು, ರಿಪಿಟೆಡ್ ಕ್ರೈಂ ಮಾಡುತ್ತಿರುವ ಅಪರಾಧಿಗಳಿಗೆ ಗಡಿಪಾರು ಮಾಡುವ ಪ್ರಕ್ರಿಯೆ ಮಾಡಲಾಗುತ್ತಿದೆ. ಈಗಾಗಲೇ 60 ಮಂದಿಯನ್ನು ಗಡಿಪಾರು ಮಾಡಲಾಗಿದೆ. ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಮೂವರಿಗೆ ನೋಟಿಸ್ ನೀಡಲಾಗಿದ್ದು, ಗಡಿಪಾರು ಪ್ರಕ್ರಿಯೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ವರದಿ ಸಲ್ಲಿಸಿದ ಪೊಲೀಸ್ ನಿರೀಕ್ಷಕರು: ಆದುದರಿಂದ ಸಮಾಜದಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಎದುರುದಾರನನ್ನು ಕಾನೂನಿನ ಚೌಕಟ್ಟಿನೊಳಗೆ ಹದ್ದು ಬಸ್ತಿನಲ್ಲಿಡಬೇಕಾಗಿದೆ. ಹೀಗಾಗಿ ಎದುರುದಾರನನ್ನು ಆತನ ಅಪರಾಧಿಕ ಚಟುವಟಿಕೆಗಳ ತಾಣದಿಂದ ಮತ್ತು ಅಪರಾಧ ಹಿನ್ನಲೆಯುಳ್ಳ ಆತನ ಸಹಚರರಿಂದ ದೂರ ಇಟ್ಟು, ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರ ಜಿಲ್ಲೆಗೆ ಗಡಿಪಾರು ಮಾಡುವುದು ಸೂಕ್ತ ಹಾಗೂ ಅನಿವಾರ್ಯವಾಗಿರುತ್ತದೆ ಎಂದು ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ವರದಿ ಸಲ್ಲಿಸಿದ್ದಾರೆ.
ಅರ್ಜಿದಾರರು ಸಲ್ಲಿಸಿರುವ ವರದಿಯ ಸಾರಾಂಶ ಮತ್ತು ದಾಖಲಾತಿಗಳನ್ನು ಪರಿಶೀಲಿಸಿದಾಗ, ಎದುರುದಾರ ಎಸಗಿರುವ ಅಪರಾಧ ಕೃತ್ಯಗಳು ಅರ್ಜಿದಾರರು ಸಲ್ಲಿಸಿರುವ ವರದಿಗೆ ಪೂರಕವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಎದುರುದಾರರ ಮೇಲೆ ಮಾಡಿರುವ ಆಪಾದನೆಗಳ ಆಧಾರದ ಮೇಲೆ ನಿಮ್ಮ ವಿರುದ್ಧ ವಿಚಾರಣೆ ಕೈಗೊಂಡು ನಿಮ್ಮನ್ನು ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರ ಜಿಲ್ಲೆಗೆ ಒಂದು ವರ್ಷದ ಅವಧಿಗೆ ಏಕೆ ಗಡಿಪಾರು ಮಾಡಬಾರದು? ಎಂದು ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
ಅರ್ಜಿದಾರರು ನಿಮ್ಮ ಮೇಲೆ ಆಪಾದಿಸಿರುವ ಮೇಲ್ಕಂಡ ಆರೋಪಗಳಿಗೆ ಹೊರಡಿಸಿರುವ ಈ ಕಾರಣ ಕೇಳುವ ಆದೇಶಕ್ಕೆ ನೀವು ದಿನಾಂಕ: 21-07-2023 ರಂದು ಅಥವಾ ಅದರ ಒಳಗಾಗಿ ಈ ನ್ಯಾಯಾಲಯಕ್ಕೆ ಹಾಜರಾಗಿ, ವಿವರಣೆಯನ್ನು ನೀಡಬೇಕು ಎಂದು ಮೂವರಿಗೆ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಮತ್ತು ಉಪ ಪೊಲೀಸ್ ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ ಮಂಗಳೂರು ನಗರ, ಅಂಶುಕುಮಾರ್ ಈ ನೋಟಿಸ್ ಕಳುಹಿಸಿದ್ದಾರೆ.