ಮಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ಆಗುವ ದೌರ್ಜನ್ಯ ಪ್ರಕರಣಗಳಲ್ಲಿ ನೊಂದವರಿಗೆ ಪರಿಹಾರವನ್ನು ವಿಳಂಬವಿಲ್ಲದೇ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ, ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ ಕಾಯ್ದೆ 1989) ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಹಾಗೂ ಸಫಾಯಿ ಕರ್ಮಚಾರಿಗಳ ನಿಷೇಧ ಮತ್ತು ಪುನರ್ವಸತಿಯ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ತನಿಖೆಯನ್ನು ಚುರುಕಾಗಿ ಕೈಗೊಂಡು ಅವರುಗಳಿಗೆ ನ್ಯಾಯ ಒದಗಿಸಬೇಕು. ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 51 ದೌರ್ಜನ್ಯ ಪ್ರಕರಣ ವರದಿಯಾಗಿವೆ. 33 ಪ್ರಕರಣಗಳಲ್ಲಿ 27.53 ಲಕ್ಷದಷ್ಟು ಪರಿಹಾರದ ಹಣ ನೀಡಲಾಗಿದೆ ಎಂದರು.
ಉಳಿದ 14 ಪ್ರಕರಣಗಳಿಗೆ ಸಂಬಧಿಸಿದಂತೆ ಶೀಘ್ರ ಪರಿಹಾರ ನೀಡುವುದರ ಜೊತೆಗೆ ತನಿಖೆಗಳನ್ನು ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪನ ಪತ್ರಗಳನ್ನು ಸಲ್ಲಿಸಬೇಕೆಂದು ಹೇಳಿದರು. ಜಿಲ್ಲೆಯಲ್ಲಿ ಡಿಸಿ ಮನ್ನಾ ಜಮೀನುಗಳ ಬಗ್ಗೆ ನಿಖರವಾದ ಮಾಹಿತಿಗಳನ್ನು ಕ್ರೊಢೀಕರಿಸಬೇಕು.
ಅವುಗಳಲ್ಲಿ ಲಭ್ಯವಿರುವುದು, ಅತಿಕ್ರಮಣವಾಗಿರುವುದು ಎಲ್ಲದರ ಬಗ್ಗೆ ಮಾಹಿತಿ ಸಂಗ್ರಹಿಸಿ ಉಳ್ಳವರು ಇದ್ದಲ್ಲಿ ಅವರನ್ನು ತೆರವುಗೊಳಿಸಬೇಕು ಎಂದರು. ಲಭ್ಯವಿರುವ ಜಮೀನುಗಳನ್ನು ನಿವೇಶನಗಳಾಗಿ ಪರಿವರ್ತಿಸಿ ಶೋಷಿತರು ಹಾಗೂ ನೊಂದವರಿಗೆ ಆದ್ಯತೆ ಮೇಲೆ ನಿವೇಶನ ನೀಡಬೇಕೆಂದು ತಿಳಿಸಿದರು.