ಮಂಗಳೂರು:ಕಾಸರಗೋಡು ಜಿಲ್ಲೆಯಲ್ಲಿ ಪತ್ತೆಯಾಗಿರುವ ಕೊರೊನಾ ಸೋಂಕಿತ ವ್ಯಕ್ತಿಯನ್ನು ಜನಸಂಪರ್ಕದಿಂದ ದೂರ ಇರಿಸಲಾಗಿದೆ. ಆದ್ದರಿಂದ ಯಾರು ಭಯಭೀತರಾಗುವುದು ಬೇಡ ಎಂದು ಆರ್ಸಿಹೆಚ್ ಅಧಿಕಾರಿ ಡಾ.ರಾಜೇಶ್ ಹೇಳಿದರು.
ನಗರದ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಚೈನಾದಿಂದ ಬಂದಾಗಲೇ ಆತನನ್ನು ತಪಾಸಣೆ ಮಾಡಲಾಗಿದ್ದು, ಕೊರೊನಾ ಸೋಂಕಿತ ಎಂದು ಸಾಬೀತಾಗಿದೆ. ಆದ್ದರಿಂದ ಆತನಿಗೆ ಚಿಕಿತ್ಸೆ ನೀಡುವ ಹಿನ್ನೆಲೆಯಲ್ಲಿ ಜನಸಂಪರ್ಕದಿಂದ ಪ್ರತ್ಯೇಕವಾಗಿ ಇರಿಸಲಾಗಿದೆ. ಹಾಗಾಗಿ ಕಾಸರಗೋಡಿನಿಂದ ಮಂಗಳೂರಿಗೆ ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಬಗ್ಗೆ ಅನುಮಾನ ಬೇಡ ಎಂದಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಮಾತನಾಡಿ, ಕಾಸರಗೋಡಿನ ಯಾರನ್ನೂ ತಪಾಸಣೆ ಮಾಡುವ ಅಗತ್ಯವಿಲ್ಲ. ಅಲ್ಲದೆ ಕೊರೊನಾ ಸೋಂಕಿತ ವ್ಯಕ್ತಿಯ ಮನೆಯವರು ಯಾರನ್ನೆಲ್ಲಾ ಸಂಪರ್ಕ ಮಾಡಿದ್ದಾರೆ ಎನ್ನುವ ಬಗ್ಗೆಯೂ ನಾವು ಮಾಹಿತಿ ಪಡೆದುಕೊಂಡಿದ್ದೇವೆ. ಆದ್ದರಿಂದ ಸೋಂಕು ಮತ್ತೆ ಯಾರಿಗೂ ತಗುಲದಂತೆ ಎಚ್ಚರಿಕೆ ವಹಿಸಿಕೊಂಡಿದ್ದೇವೆ ಎಂದು ಹೇಳಿದರು.
ಈಗಾಗಲೇ ಚೈನಾ ಅಥವಾ ಕೊರಾನಾ ಸೋಂಕು ಪ್ರದೇಶಗಳಿಂದ ಬಂದವರು ದಯವಿಟ್ಟು ತಮ್ಮನ್ನು ಸಂಪರ್ಕಿಸಿ. ಅವರಿಗೆ ಕೊರೊನಾ ಸೋಂಕು ಇರಲಿ, ಇಲ್ಲದೆ ಇರಲಿ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ತಪಾಸಣೆ ಮಾಡಲಾಗುತ್ತದೆ. ಅಲ್ಲದೆ ಶೀತ, ಕೆಮ್ಮು, ಜ್ವರದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾದರು, ನಮ್ಮನ್ನು ಸಂಪರ್ಕಿಸಲಿ ಎಂದು ನಾವು ಈಗಾಗಲೇ ಮಾಧ್ಯಮದ ಮೂಲಕ ತಿಳಿಸಿದ್ದೇವೆ ಎಂದರು.