ಪುತ್ತೂರು :ತಾಲೂಕಿನ ಬೆಟ್ಟಂಪಾಡಿ ಹಾಗೂ ಬಲ್ನಾಡು ಗ್ರಾಮಗಳಲ್ಲಿ ಡೆಂಘೀ ಪ್ರಕರಣ ದಾಖಲಾಗಿವೆ. ಹಾಗಾಗಿ 24 ಗಂಟೆಯೊಳಗೆ ಕೊರೊನಾ ಸೋಂಕಿನ ಪ್ರಕರಣಗಳ ಪಾಸಿಟಿವ್-ನೆಗೆಟಿವ್ ವರದಿ ನೀಡಲಾಗುವುದು ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ನವೀನ್‌ಚಂದ್ರ ಕುಲಾಲ್ ತಿಳಿಸಿದರು.
ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆ ಮತ್ತು ಖಾಸಗಿ ವೈದ್ಯರಿಗೆ ಡೆಂಘೀ, ಮಲೇರಿಯಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನ ಬೆಟ್ಟಂಪಾಡಿ ಗ್ರಾಮದಲ್ಲಿ ಈಗಾಗಲೇ ಒಂದು ಡೆಂಘೀ ಪ್ರಕರಣ ದಾಖಲಾಗಿದೆ. 20 ಮಂದಿ ಶಂಕಿತ ಡೆಂಘೀ ಪ್ರಕರಣದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಲ್ನಾಡು ಗ್ರಾಮದ 15 ಶಂಕಿತ ಡೆಂಘೀ ಪ್ರಕರಣಗಳು ದಾಖಲಾಗಿದೆ. ಪಾಣಾಜೆ, ತಿಂಗಳಾಡಿ, ಕಡಬ, ಉಪ್ಪಿನಂಗಡಿ ಭಾಗದಲ್ಲಿಯೂ ಡೆಂಘೀ ಶಂಕಿತ ಪ್ರಕರಣ ಕಂಡು ಬಂದಿವೆ. ಕೊರೊನಾ, ಡೆಂಘೀ ಹಾಗೂ ಮಲೇರಿಯಾ ಒಟ್ಟಾಗಿ ಬಂದರೆ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಜನತೆ ಹೆಚ್ಚು ಜಾಗರೂಕತೆ ವಹಿಸಬೇಕಾಗಿದೆ ಎಂದರು.